ಮಾನ್ವಿ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಮೊದಲ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ-2026 ಆಯೋಜಿಸಲಾಗಿದೆ.(ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026)
ಕರ್ನಾಟಕ ಪಕ್ಷಿ ಮೇಲ್ವಿಚಾರಣಾ ಜಾಲ ಸೇರಿದಂತೆ ರಾಜ್ಯದ ಪಕ್ಷಿವೀಕ್ಷಕ ಸಮುದಾಯದ ಸಹಯೋಗದಲ್ಲಿ ನಡೆಯಲಿರುವ ಈ ಗಣತಿಯು ರಾಜ್ಯದ ಪಕ್ಷಿ ವೈವಿಧ್ಯತೆ, ಅವುಗಳ ವಾಸಸ್ಥಾನ ಹಾಗೂ ವಿವಿಧ ಪ್ರದೇಶಗಳಲ್ಲಿ ಪಕ್ಷಿಗಳ ಇರುವಿಕೆಯ ಕುರಿತು ಮಹತ್ವದ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ನೆರವಾಗಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿರುವ ಈ ಅಭಿಯಾನದಲ್ಲಿ ಪಕ್ಷಿಪ್ರೇಮಿಗಳು, ಪ್ರಕೃತಿ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಭಾಗವಹಿಸುವವರು ಕನಿಷ್ಠ 15 ನಿಮಿಷಗಳ ಕಾಲ ಪಕ್ಷಿವೀಕ್ಷಣೆ ನಡೆಸಿ, ತಾವು ವೀಕ್ಷಿಸಿದ ಪಕ್ಷಿಗಳ ಹೆಸರು ಮತ್ತು ಅವುಗಳ ಸಂಖ್ಯೆಯ ವಿವರಗಳನ್ನು ಇ-ಮೊಬೈಲ್ ಆ್ಯಪ್ ಮೂಲಕ ದಾಖಲಿಸಿ ಅಪ್ಲೋಡ್ ಮಾಡಬೇಕು. ದೃಷ್ಟಿಯಿಂದ ಅಥವಾ ಪಕ್ಷಿಗಳ ಧ್ವನಿಯ ಆಧಾರದ ಮೇಲೆ ಗುರುತಿಸಲು ಸಾಧ್ಯವಾಗುವ ಎಲ್ಲ ಪಕ್ಷಿಗಳನ್ನು ದಾಖಲಿಸುವುದು ಗಣತಿಯ ಪ್ರಮುಖ ನಿಯಮವಾಗಿದೆ. ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026
ಮನೆಯ ಅಂಗಳ, ತಾರಸಿ, ಉದ್ಯಾನ, ಕೃಷಿಭೂಮಿ, ಕೆರೆ, ಅರಣ್ಯ ಹಾಗೂ ತೇವಭೂಮಿ ಸೇರಿದಂತೆ ಯಾವುದೇ ಸ್ಥಳದಲ್ಲಿ ಪಕ್ಷಿವೀಕ್ಷಣೆ ನಡೆಸಬಹುದು. ಈ ಮೂಲಕ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವುದರ ಜತೆಗೆ ರಾಜ್ಯದ ಜೀವವೈವಿಧ್ಯ ಸಂರಕ್ಷಣೆಗೆ ಕೊಡುಗೆ ನೀಡಬಹುದಾಗಿದೆ.
ಗಣತಿಯಲ್ಲಿ ಭಾಗವಹಿಸುವವರ ಪೈಕಿ ಆಯ್ಕೆಯಾಗುವ ಒಬ್ಬರಿಗೆ ಕರ್ನಾಟಕ ಪಕ್ಷಿ ಮೇಲ್ವಿಚಾರಣಾ ಜಾಲದ ವತಿಯಿಂದ ಅಭಿನಂದನಾ ಉಡುಗೊರೆ ನೀಡಲಾಗುತ್ತದೆ.
ಗಣತಿಯಲ್ಲಿ ಭಾಗವಹಿಸುವ ವಿಧಾನ, ಹೆಚ್ಚಿನ ಮಾಹಿತಿ ಹಾಗೂ ವೀಡಿಯೊ ಮಾರ್ಗದರ್ಶನಕ್ಕಾಗಿ https://birdcount.in/event/krbc/ ವೆಬ್ಸೈಟ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ವಿಘ್ನೇಶ ಭಟ್ (9035237091) ಅವರನ್ನು ಸಂಪರ್ಕಿಸಬಹುದು ಅಥವಾ Karnatakarajyotsavabirdcount@gmail.com ಇ-ಮೇಲ್ಗೆ ಸಂದೇಶ ಕಳುಹಿಸಬಹುದು ಎಂದು ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ-2026ರ ಸಂಯೋಜಕಿ ಸಹನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








