ಸಿರವಾರ: ಪಟ್ಟಣದಲ್ಲಿ ಟ್ಯಾಕ್ಸಿ ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ಸಿರವಾರದ ಟ್ಯಾಕ್ಸಿ ಚಾಲಕರ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಟ್ಯಾಕ್ಸಿ ಚಾಲಕರಾಗಿ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿರುವ ನಾವು, ಕಳೆದ 20 ವರ್ಷಗಳಿಂದ ಪಟ್ಟಣದ ನೀರಾವರಿ ಇಲಾಖೆಯ ಆವರಣದ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದೆವು. ಆದರೆ ಕಳೆದ ಒಂದು ವರ್ಷದ ಹಿಂದೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆ ಜಾಗಕ್ಕೆ ತಂತಿ ಬೇಲಿ ಹಾಕಿ ಪಾರ್ಕಿಂಗ್‌ಗೆ ತಡೆ ಒಡ್ಡಿದ್ದಾರೆ.

ಸಿರವಾರ ಪಟ್ಟಣದಲ್ಲಿ ಪ್ರತ್ಯೇಕ ಮತ್ತು ಸುಸಜ್ಜಿತ ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳವಿಲ್ಲದ ಕಾರಣ, ಕಳೆದ 20 ವರ್ಷಗಳಿಂದ ನೀರಾವರಿ ಇಲಾಖೆ ಆವರಣದ ಜಾಗವನ್ನೇ ಅವಲಂಬಿಸಿದ್ದೇವೆ.
ಆ ಜಾಗವನ್ನು ನಾವೇ ಸ್ವಚ್ಛವಾಗಿಟ್ಟುಕೊಂಡು, ಯಾವುದೇ ಸಾರ್ವಜನಿಕ ಆಸ್ತಿಗೆ ಧಕ್ಕೆ ಬಾರದಂತೆ ಕಾಪಾಡಿಕೊಂಡು ಬಂದಿದ್ದೇವೆ.

ಕಾರಣಾಂತರದಿಂದ ಬೇಲಿ ಹಾಕಿ ನಿಲುಗಡೆಗೆ ತಡೆ ಒಡ್ಡಿದ್ದರಿಂದ, ಅನಿವಾರ್ಯವಾಗಿ ಮುಖ್ಯ ರಸ್ತೆಯ ಬದಿಯಲ್ಲೇ ವಾಹನ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ.
ಮುಖ್ಯ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಭಾರಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ರಸ್ತೆಯಲ್ಲಿ ಹೋಗುವ ದೊಡ್ಡ ವಾಹನಗಳು ತಾಗಿ, ಲಾರಿಗಳ ಗಾಳಿಯಿಂದ ಸಿಡಿಯುವ ಕಲ್ಲುಗಳು ಬಿದ್ದು ನಮ್ಮ ವಾಹನಗಳ ಗಾಜುಗಳು ಒಡೆದು ಸಾವಿರಾರು ರೂಪಾಯಿ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಈ ಕುರಿತು ನೀರಾವರಿ ಇಲಾಖೆಯ ಎ ಇ ಇ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.

ಆದ್ದರಿಂದ ಚಾಲಕರ ಜೀವನೋಪಾಯ ಮತ್ತು ಕುಟುಂಬ ನಿರ್ವಹಣೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸುಗಮ ಸಂಚಾರದ ದೃಷ್ಟಿಯಿಂದ, ನೀರಾವರಿ ಇಲಾಖೆಯ ಎ ಇ ಇ ಅವರಿಗೆ ಸೂಕ್ತ ನಿರ್ದೇಶನ ಅಥವಾ ಶಿಫಾರಸ್ಸು ಪತ್ರ ನೀಡಿ, ಪಟ್ಟಣದ ಚಾಲಕರಿಗೆ ಮೊದಲಿನಂತೆ ವಾಹನ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರಲ್ಲಿ ಮನವಿ ಸಲ್ಲಿಸಿದ್ದಾರೆ.

ಎಸ್. ಎ. ವೀರೇಶ, ಶ್ರೀಕಾಂತ ಚಾಗಭಾವಿ, ಮಂಜು ಮುರ್ಕಿಗುಡ್ಡ, ಸುರೇಶಗೌಡ ಹೆಗ್ಗಡದಿನ್ನಿ, ಅಜ್ಮೀರ್ ಪಾಷಾ ನಾಗಡದಿನ್ನಿ, ರಸೂಲ್ ಸಿರವಾರ, ವಿಜ್ಜು ಸಿರವಾರ, ಫಿರೋಜ್ ಸಿರವಾರ, ರಾಜ ಗಣೇಕಲ್, ವೀರೇಶ ತಿಪ್ಪಲದಿನ್ನಿ ಸೇರಿದಂತೆ ಟ್ಯಾಕ್ಸಿ ಚಾಲಕರು ಇದ್ದರು.

Previous article​ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಯುವಜನತೆಯ ಮಾನವೀಯ ಕಾರ್ಯ ಅಭಿನಂದನೀಯ: ನಟರಾಜ್ ಗೌಡ ಪೊಲೀಸ್ ಪಾಟೀಲ್
Next articleಕೃಷ್ಣಾ–ತುಂಗಭದ್ರಾ ನದಿಗಳಿದ್ದರೂ ರೈತರಿಗೆ ನೀರಿನ ಕೊರತೆ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆಗೆ ಕೆ. ಶಿವನಗೌಡ ನಾಯಕ ಆಗ್ರಹ