ಸಿರವಾರ: “ಆಪತ್ತಿನಲ್ಲಿರುವ ಮತ್ತೊಬ್ಬ ವ್ಯಕ್ತಿಯ ಪ್ರಾಣ ಉಳಿಸುವ ರಕ್ತದಾನವು ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಕೊಡುಗೆಯಾಗಿದೆ. ಇಂದಿನ ದಿನಗಳಲ್ಲಿ ಜರುಗುವ ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಿದ್ದು, ಮಾಡಗಿರಿಯ ಯುವಕರ ಬಳಗ ಹಾಗೂ ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ಹಮ್ಮಿಕೊಂಡಿರುವ ಈ ರಕ್ತದಾನ ಶಿಬಿರ ಅತ್ಯಂತ ಮಾನವೀಯ ಹಾಗೂ ಶ್ಲಾಘನೀಯ ಕಾರ್ಯವಾಗಿದೆ” ಎಂದು ಗ್ರಾಮದ ಹಿರಿಯ ಮುಖಂಡರಾದ ನಟರಾಜ್ ಗೌಡ ಪೊಲೀಸ್ ಪಾಟೀಲ್ ಹೇಳಿದರು.
ತಾಲೂಕಿನ ಮಾಡಗಿರಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಮಾಡಗಿರಿ ಯುವಕರ ಬಳಗ, ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ (ರಿ.) ಹಾಗೂ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಉಚಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಣ ರಕ್ಷಣೆಯೊಂದಿಗೆ ಸಾಮಾಜಿಕ ಜಾಗೃತಿ
”ರಕ್ತದಾನ ಮಾಡುವುದರಿಂದ ಕೇವಲ ಜೀವ ಉಳಿಸುವುದು ಮಾತ್ರವಲ್ಲದೆ, ನಮ್ಮಲ್ಲಿ ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳು ಗಟ್ಟಿಯಾಗುತ್ತವೆ. ಪ್ರತಿಯೊಬ್ಬ ಆರೋಗ್ಯವಂತ ಯುವಕನೂ ಯಾವುದೇ ಆತಂಕವಿಲ್ಲದೆ ಸ್ವಯಂಪ್ರೇರಿತನಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದ ಮಹತ್ವದ ಕುರಿತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ರೋಗಿಗಳ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಅವರು ಕರೆ ನೀಡಿದರು.
64 ರಕ್ತದಾನಿಗಳಿಗೆ ಅಭಿನಂದನೆ
ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ 64 ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬ ಯುವಕನಿಗೂ ಸಂಘಟಕರ ವತಿಯಿಂದ ಅಭಿನಂದಿಸಿ, ಮೆಚ್ಚುಗೆಯ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು.
ಹಲವು ಮುಖಂಡರಿಂದ ಚಿಂತನ-ಮಂಥನ
ಕಾರ್ಯಕ್ರಮದಲ್ಲಿ ಮೋದಿನ್ ಮಾಚನೂರು,ಸಂಪನ್ಮೂಲ ವ್ಯಕ್ತಿ ಮಹೆಬೂಬ್ ಮದ್ಲಾಪುರು, ಹಾಗೂ ದಲಿತ ಸಾಹಿತ್ಯ ಪರಿಷತ್ ಸಿರವಾರ ತಾಲೂಕು ಘಟಕ ದ ಅಧ್ಯಕ್ಷ ಶಿವಪ್ಪ ನಾಯಕ ಕಲ್ಲೂರು ಅವರು ರಕ್ತದಾನ ಹಾಗೂ ಯುವಜನತೆಯ ಸಾಮಾಜಿಕ ಜವಾಬ್ದಾರಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಎಂ.ಡಿ. ಇಸ್ಮಾಯಿಲ್ ಆಡಿದರು. ಅಜೀಂ ಪ್ರೇಮ್ಜಿ ಫೌಂಡೇಶನ್ನ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಹುಸೇನ್ ಅವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ನರಸಮ್ಮ, ರಿಮ್ಸ್ ರಕ್ತನಿಧಿ ಕೇಂದ್ರದ ಡಾ. ರಾಧಾ, ಸಿ.ಹೆಚ್.ಓ. ಎಂ.ಡಿ. ಶಬೀರ್, ಮಾಡಗಿರಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ. ಬಸವರಾಜ್ ನಾಯಕ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಗೌಡ, ದೇವರಾಜ ಗೌಡ, ಬಸಯ್ಯ ತಾತ, ಹುಸೇನ್ ಸಾಬ್, ಲವಕುಮಾರ, ಜಯವಂತ, ಅನಿಲ್ ಕುಮಾರ್, ಕೆ. ಯೇಸು, ಎಂ. ಹನುಮಂತ ನಾಯಕ, ರವಿಕುಮಾರ್, ಸಂಗಮೇಶ ತಾತ, ಡಾ. ವಲಿಪಾಷ, ಡಾ. ಶರಣಪ್ಪ, ಶರಣಪ್ಪ ಗೌಡ, ಬಸವರಾಜ್ ಗೌಡ, ಅರುಣ ಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಮೈನುದ್ದೀನ್, ಪ್ರಕಾಶ ಸಾಹುಕಾರ, ಖಾಸಿಂ ಅಲಿ ಸಾಬ್, ದಿಲೀಪ್ ಕುಮಾರ, ಬಸವರಾಜ್ ಮಾಸ್ಟರ್, ಗುಂಡಪ್ಪ, ಪ್ರದೀಪ್ ಕುಮಾರ್, ವೆಂಕಟೇಶ್, ಜಾರ್ಜ್, ಭೀಮಣ್ಣ, ನಿಲ್ಲಯ್ಯ, ಮನೋಜ್, ಅರುಣ ಕುಮಾರ್, ಯಮೂನಪ್ಪ ಸೇರಿದಂತೆ ಊರಿನ ಪ್ರಮುಖರು, ಬ್ಲೆಸ್ಸಿಂಗ್ ಟ್ರಸ್ಟ್ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.








