ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುವಂತಾಗಿದೆ. ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಬೆಳೆಗಳು ಒಣಗುವ ಆತಂಕ ಎದುರಾಗಿದೆ. ರೈತರ ಬೆಳೆಗಳನ್ನು ಉಳಿಸಲು ಸರ್ಕಾರ ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ಆಗ್ರಹಿಸಿದ್ದಾರೆ.

ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಭಾಗಶಃ ಪ್ರದೇಶಗಳ ರೈತರಿಗೆ ನೀರು ಒದಗಿಸಲು ಸಾಕಷ್ಟು ನೀರಿನ ಲಭ್ಯತೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ಬದಲಾಗಿ ಜಿಂದಾಲ್ ಮತ್ತು ಬೈಡೋಟಾ ಕಂಪನಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆಂಧ್ರಪ್ರದೇಶಕ್ಕೂ ನೀರು ಹರಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಹಾಗೂ ಹೊರರಾಜ್ಯಗಳಿಗೆ ನೀರು ಪೂರೈಸುವುದಕ್ಕಿಂತ ಸ್ಥಳೀಯ ರೈತರ ಕೃಷಿ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಬೆಳೆಗಳಿಗೆ ನೀರು ಬಿಡುಗಡೆ ಮಾಡದೆ ಕಂಪನಿಗಳಿಗೆ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ನವಲಿ ಜಲಾಶಯ ಹಾಗೂ ತಿಂಥಣಿ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಮುಂದಿನ ಪ್ರಕ್ರಿಯೆ ಆರಂಭಿಸಬೇಕು. ಈ ಯೋಜನೆಗಳಿಂದ ಐದು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದ್ದು, ಪ್ರಸ್ತುತ ನೀರಿನ ಸಮಸ್ಯೆಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಸರ್ಕಾರ ಕೂಡಲೇ ತುರ್ತು ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗಂಭೀರ ನೀರಾವರಿ ಸಮಸ್ಯೆ ಉಂಟಾಗಲು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ರೈತರ ಸಮಸ್ಯೆಗಳ ವಿಚಾರದಲ್ಲಿ ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಪರವಾಗಿ ಧ್ವನಿ ಎತ್ತಬೇಕು. ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ರೈತರ ಬದುಕು ಮತ್ತು ಕೃಷಿ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವರ ತಾಳ್ಮೆಯನ್ನು ಪರೀಕ್ಷಿಸದೆ ನ್ಯಾಯಸಮ್ಮತ ಹಾಗೂ ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಬೇಕು. ನವೆಂಬರ್ 22ರ ಒಳಗಾಗಿ ರೈತರ ನೀರಾವರಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕೆ. ಶಿವನಗೌಡ ನಾಯಕ ಒತ್ತಾಯಿಸಿದ್ದಾರೆ.

Previous articleಸಿರವಾರ: ಟ್ಯಾಕ್ಸಿ ಕಾರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಟ – ತಹಶೀಲ್ದಾರರಿಗೆ ಮನವಿ
Next articleಆರ್ಯವೈಶ್ಯ ಸಂಘದಿAದ ಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ 2 ಲಕ್ಷ ರೂಗಳ ಸಹಾಯದಾನ