Homeಜಿಲ್ಲೆಗಳುರಾಯಚೂರುಚಾಗಬಾವಿ ಗ್ರಾಮದಲ್ಲಿ ಜಾಬ್‌ ಕಾರ್ಡ್‌ ಮೇಳ: 55 ಹೊಸ ಅರ್ಜಿಗಳ ಸ್ವೀಕಾರ

ಚಾಗಬಾವಿ ಗ್ರಾಮದಲ್ಲಿ ಜಾಬ್‌ ಕಾರ್ಡ್‌ ಮೇಳ: 55 ಹೊಸ ಅರ್ಜಿಗಳ ಸ್ವೀಕಾರ

ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಚಾಗಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಜಾಬ್‌ ಕಾರ್ಡ್‌ ಮೇಳ ಆಯೋಜಿಸಲಾಯಿತು.
ಮೇಳದ ಅಂಗವಾಗಿ ಐಇಸಿ ಸಂಯೋಜಕ ರಾಜೇಂದ್ರ ಅವರ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡಿ, ಜಾಬ್‌ ಕಾರ್ಡ್‌ ಹೊಂದಿರದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ಕರಪತ್ರಗಳನ್ನು ವಿತರಿಸಿ, ಅರ್ಹರಿಂದ ನಮೂನೆ–1ರಲ್ಲಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.
ಅರ್ಜಿದಾರರಿಂದ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿಗಳು ಹಾಗೂ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳನ್ನು ಸಂಗ್ರಹಿಸಲಾಯಿತು. ಮೇಳದಲ್ಲಿ ಒಟ್ಟು 55 ಹೊಸ ಜಾಬ್‌ ಕಾರ್ಡ್‌ ಅರ್ಜಿಗಳು ಹಾಗೂ 10 ವೈಯಕ್ತಿಕ ಕಾಮಗಾರಿಗಳ ಪಟ್ಟಿಗಳನ್ನು ಸ್ವೀಕರಿಸಲಾಯಿತು. ಇನ್‌ಆಕ್ಟೀವ್‌ ಆಗಿರುವ ಜಾಬ್‌ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಸೂಚಿಸಲಾಯಿತು. ಇದೇ ವೇಳೆ ಹೊಸ ಜಾಬ್‌ ಕಾರ್ಡ್‌ಗಳನ್ನು ವಿತರಿಸಲಾಯಿತು.
ವಿಬಿ–ಜಿ ರಾಮ್‌ ಜಿ ಯೋಜನೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಉದ್ಯೋಗ ಒದಗಿಸಲಾಗುತ್ತಿದ್ದು, ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ದಿನಕ್ಕೆ ₹382 ಕೂಲಿ ನೀಡಲಾಗುತ್ತದೆ ಎಂದು ತಿಳಿಸಲಾಯಿತು.
ಸಮುದಾಯ ಆಧಾರಿತ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಯಿತು.
ಹಳೆಯ ಎಂ.ಜಿ.ನರೇಗಾ ಯೋಜನೆಯ ಜಾಬ್‌ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಿಸಿರುವ ಕಾರ್ಡ್‌ಗಳನ್ನು ಮಾತ್ರ ಮುಂದುವರಿಸಲಾಗುವುದು. ಹೊಸದಾಗಿ ಜಾಬ್‌ ಕಾರ್ಡ್‌ ಪಡೆಯಲು ಬಯಸುವ ಅರ್ಹರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಹೊಸ ಜಾಬ್‌ ಕಾರ್ಡ್‌ ಮಾಡಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿ ಬಿಎಫ್‌ಟಿ ಮಹಿಬೂಬ್‌ ತಿಳಿಸಿದರು.
ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಫಾರಂ–6 ಅನ್ನು ಸಹ ನೀಡಲಾಗುವುದು ಎಂದು ಅವರು ಹೇಳಿದರು.
ಚಾಗಬಾವಿ, ಚಾಗಬಾವಿ ಕ್ಯಾಂಪ್‌, ಜಾಲಾಪುರ, ಭಾಗ್ಯನಗರ ಕ್ಯಾಂಪ್‌ ಹಾಗೂ ಶಾಸ್ತ್ರಿ ಕ್ಯಾಂಪ್‌ಗಳಲ್ಲಿ ಜಾಬ್‌ ಕಾರ್ಡ್‌ ಮೇಳ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮೇಟ್‌ಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.

RELATED ARTICLES

Most Popular

Recent Comments