ರಾಯಚೂರು: ರಾಯಚೂರು ನ್ಯಾಯವಾದಿಗಳ ಸಂಘ ಹಾಗೂ ನ್ಯಾಯಾಂಗ ಇಲಾಖೆಯ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್. ಶಿವಶಂಕರ್, ಸತ್ಯಾಗ್ರಹ ಮತ್ತು ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟ ನಡೆಸಿದ ಗಾಂಧೀಜಿ ಅವರ ಕೊಡುಗೆ ಅಪಾರವಾಗಿದೆ ಎಂದರು. ededore news
ಸರ್ವಧರ್ಮ ಸಮನ್ವಯ, ಸ್ವಾವಲಂಬನೆ ಮತ್ತು ಸ್ವದೇಶಿ ಚಿಂತನೆ ಗಾಂಧೀಜಿ ಅವರ ಪ್ರಮುಖ ಆಶಯಗಳಾಗಿದ್ದವು. ದೇಶದ ಇಂದಿನ ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದಾಗಲೂ ಗಾಂಧೀಜಿ ಅವರ ವಿಚಾರಧಾರೆಗಳು ಪ್ರಸ್ತುತವಾಗಿವೆ. ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಶಾಶ್ವತವಾಗಿದ್ದು, ಸಮಾಜಮುಖಿ ಚಿಂತನೆಗಳು ಇಂದಿಗೂ ಅಗತ್ಯವಾಗಿವೆ ಎಂದು ಹೇಳಿದರು.
ಗ್ರಾಮೀಣ ಭಾರತ ಹಾಗೂ ಸಾಮಾಜಿಕವಾಗಿ ಸಮಾನತೆಯ ಸಮಾಜ ನಿರ್ಮಾಣದ ಕುರಿತು ಗಾಂಧೀಜಿ ಕಂಡಿದ್ದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಸಿ. ವೀರೇಶ್ ಮಾತನಾಡಿ, ಗಾಂಧೀಜಿ ಅವರ ಚಿಂತನೆಗಳಲ್ಲಿ ಸ್ವಚ್ಛತೆಗೆ ವಿಶೇಷ ಸ್ಥಾನವಿತ್ತು. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ರಾಯಚೂರು news
ನ್ಯಾಯಾಂಗ ಇಲಾಖೆಯ ಅಧಿಕಾರಿ ಗುರುನಾಥ್ ರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ಹನುಮಂತರೆಡ್ಡಿ, ಸಹಕಾರ್ಯದರ್ಶಿ ಮರಿಯಪ್ಪ, ಹಿರಿಯ ವಕೀಲರಾದ ಜಿ.ಟಿ. ರೆಡ್ಡಿ, ಲಕ್ಷ್ಮಪ್ಪ ಭಂಡಾರಿ, ಪಾಂಡು, ನಾರಾಯಣ್, ಮಲ್ಲಪ್ಪ, ವೀರಯ್ಯಸ್ವಾಮಿ, ಮಾರೆಪ್ಪ, ಪ್ರಸಾದ್, ವೆಂಕಟೇಶ್, ವಾಣಿ, ಪ್ರವೀಣ್ ಸೇರಿದಂತೆ ನ್ಯಾಯವಾದಿಗಳು ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.








