ಸಿರವಾರ: ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಭ್ರಷ್ಟಾಚಾರ, ಸಚಿವರ ಹಗರಣಗಳು ಹಾಗೂ ಬರಪೀಡಿತ ತಾಲೂಕುಗಳಿಗೆ ಪರಿಹಾರ ವಿತರಿಸುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ‘ಬಳ್ಳಾರಿ ಚಲೋ’ ಪಾದಯಾತ್ರೆಯಲ್ಲಿ ಸಿರವಾರ ಮಂಡಲದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಶುಕ್ರವಾರ ಪಾದಯಾತ್ರೆಯು ಯಶಸ್ವಿಯಾಗಿ 4ನೇ ದಿನಕ್ಕೆ ಕಾಲಿಟ್ಟಿದ್ದು, ಸಿಂಧನೂರಿನಿಂದ ಪ್ರಾರಂಭಗೊಂಡು ಕಾರಟಗಿ ಪಟ್ಟಣದತ್ತ ಸಾಗಿತು.
ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹರಿಹಾಯ್ದ ನಾಯಕರು ಮತ್ತು ಕಾರ್ಯಕರ್ತರು ಉಗ್ರ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಪಾದಯಾತ್ರೆಯಲ್ಲಿ ಮಾಜಿ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ. ವಿ. ನಾಯಕ್ ಮತ್ತು ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರೊಂದಿಗೆ ಸಿರವಾರ ಮಂಡಲದ ಪ್ರಮುಖ ನಾಯಕರು ಹೆಜ್ಜೆ ಹಾಕಿದರು.
ವಿಶೇಷವಾಗಿ ಸಿರವಾರ ಮಂಡಲ ಬಿಜೆಪಿ ಅಧ್ಯಕ್ಷ ಆರ್. ಕೆ. ಅಮರೇಶಪ್ಪ ಸಾಹುಕಾರ, ಪ್ರಧಾನ ಕಾರ್ಯದರ್ಶಿ ಎಂ. ಉದಯಕುಮಾರ ಚಾಗಭಾವಿ, ನಾಯಕ ನಾಗೇಶ ನಾಯಕ ಸೇರಿದಂತೆ ಮಂಡಲದ ಹಲವಾರು ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜಾತಕ್ಕೆ ಆನೆಬಲ ನೀಡಿದರು.








