ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಮುಖಂಡ ಶ್ರೀರಾಮುಲು ಏಕವಚನದಲ್ಲಿ ಉಲ್ಲೇಖಿಸುತ್ತಿರುವುದಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರು ಪರಸ್ಪರ ಗೌರವದಿಂದ ಮಾತನಾಡಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಅವರನ್ನು ಮತ್ತೆ ‘ಅವನು’, ‘ಇವನು’ ಎಂದು ಸಂಬೋಧಿಸಿದರೆ, ಅದಕ್ಕೆ ತಕ್ಕ ರೀತಿಯಲ್ಲಿ ‘ನೀನು ಯಾವನೋ’ ಎಂದು ಪ್ರಶ್ನಿಸಬೇಕಾಗುತ್ತದೆ ಎಂದು ಪ್ರದೀಪ್ ಈಶ್ವರ್ ಶ್ರೀರಾಮುಲು ಅವರಿಗೆ ಎಚ್ಚರಿಕೆ ನೀಡಿದರು. ಗೌರವಯುತವಾಗಿ ಮಾತನಾಡುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಬೇಕಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ವ್ಯಂಗ್ಯವಾಗಿ ಟೀಕಿಸಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಲವು ಅಕ್ರಮಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳ ಕುರಿತು ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋವಿಡ್ ಸಂಬಂಧಿತ ಅಕ್ರಮ, ಬೋವಿ ನಿಗಮದ ಅವ್ಯವಹಾರ, ನೀಟ್ ಅಕ್ರಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣ, ಕಿಯೋನಿಕ್ಸ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪ, ಪಿಎಸ್‌ಐ ನೇಮಕಾತಿ ಅಕ್ರಮ, ಪರಶುರಾಮ್ ಥೀಮ್ ಪಾರ್ಕ್ ಪ್ರಕರಣ, ಬಿಟ್‌ಕಾಯಿನ್ ಪ್ರಕರಣ ಹಾಗೂ ಕೆಕೆಆರ್‌ಡಿಬಿಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ ಹಾಗೂ ಅಶೋಕ್ ಅವರ ಅಧಿಕಾರಾವಧಿಯಲ್ಲಿ ಕೇಳಿಬಂದಿರುವ ಆರೋಪಗಳಿಗೆ ಮೊದಲು ಉತ್ತರಿಸಲಿ. ರಾಜ್ಯವನ್ನು ಲೂಟಿ ಮಾಡಿದವರಿಂದ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ವಿವಿಧ ಯೋಜನೆಗಳನ್ನೂ ಸಮರ್ಥಿಸಿಕೊಂಡ ಪ್ರದೀಪ್ ಈಶ್ವರ್, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೆರವು ನೀಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ₹57 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲ ಸೇರಿದಂತೆ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ವಿರೋಧ ಪಕ್ಷದ ನಾಯಕರು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ ಎಂದು ಅವರು ಟೀಕಿಸಿದರು. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಡೊಳ್ಳು ಬಾರಿಸುತ್ತಾ, ನೃತ್ಯ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶ್ರೀರಾಮುಲು ಅವರು ಇನ್ನು ಮುಂದೆ ವೈಯಕ್ತಿಕ ನಿಂದನೆಗೆ ಇಳಿಯದೆ ರಾಜಕೀಯ ವಿಚಾರಗಳ ಕುರಿತು ಗೌರವಯುತವಾಗಿ ಮಾತನಾಡಬೇಕು. ಇದೇ ರೀತಿ ಮುಂದುವರಿದರೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಪ್ರದೀಪ್ ಈಶ್ವರ್ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

Previous articleಮಂತ್ರಾಲಯದ ರಾಯರ ದರ್ಶನ ಪಡೆದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ
Next articleಸಿರವಾರ ಬಿಜೆಪಿ ಮುಖಂಡರಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಬೆಂಬಲ: ಸಿಂಧನೂರಿನಿಂದ ಕಾರಟಗಿಯತ್ತ ಸಾಗಿದ ಬೃಹತ್ ಜಾಥಾ