ಮಾನ್ವಿ: ಹುಟ್ಟು ಮತ್ತು ಸಾವಿನ ನಡುವಿನ ಬದುಕನ್ನು ಸುಂದರಗೊಳಿಸಿಕೊಳ್ಳಲು ಪುರಾಣ ಪ್ರವಚನಗಳನ್ನು ಆಲಿಸುವುದರ ಜೊತೆಗೆ ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಂದವಾಡಗಿ ಆಳಂದ ಜಾಲವಾದಿಯ ಶ್ರೀ ಮಹಾಂತೇಶ್ವರ ಮಠದ ಶ್ರೀ ಮ. ಘ. ಚ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಕರೆಗುಡ್ಡ ಶ್ರೀಮಠ ಶ್ರೀದೇವಿ ಪುರಾಣ
ತಾಲೂಕಿನ ಕರೆಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕರೆಗುಡ್ಡದ ಶ್ರೀಮಠವು ಅಂಬಾದೇವಿಯ ಮಹಿಮೆಯಿಂದ ವಿಶೇಷ ಸ್ಥಾನಮಾನ ಹೊಂದಿದೆ. ಈ ಕ್ಷೇತ್ರದಲ್ಲಿ ಅಂಬಾದೇವಿ ನೆಲೆಸಿರುವುದಕ್ಕೆ ಸಾಕ್ಷಿಯಾಗುವಂತಹ ಅನೇಕ ವಿಶೇಷತೆಗಳಿವೆ. ಅಡುಗೆ ಮಾಡಿದಾಗ ಹೊಗೆ ಹಾಗೂ ವಾಸನೆ ಸಾಮಾನ್ಯವಾಗಿ ಸುತ್ತಮುತ್ತಲಿನವರಿಗೆ ಅನುಭವಕ್ಕೆ ಬರುತ್ತವೆ. ಆದರೆ ಇಲ್ಲಿ ಅಂತಹ ಅನುಭವವಾಗುವುದಿಲ್ಲ ಎಂಬ ನಂಬಿಕೆ ಅಂಬಾದೇವಿಯ ಶಕ್ತಿ ಮತ್ತು ಮಹಿಮೆಯ ಬಗ್ಗೆ ಭಕ್ತರಲ್ಲಿ ವಿಶೇಷ ಭಕ್ತಿಭಾವ ಮೂಡಿಸಿದೆ ಎಂದು ತಿಳಿಸಿದರು.
ನಂದವಾಡಗಿ ಆಳಂದ ಜಾಲವಾದಿಯ ಷ. ಬ್ರ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಧಾರ್ಮಿಕ ಮೌಲ್ಯಗಳು ಮಹತ್ವದ್ದಾಗಿವೆ. ಹುಟ್ಟು ಮತ್ತು ಸಾವಿನ ನಡುವಿನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪುರಾಣ ಪ್ರವಚನಗಳನ್ನು ಆಲಿಸಬೇಕು. ಲೌಕಿಕ ಮೋಹಗಳನ್ನು ತೊರೆದು ಆಧ್ಯಾತ್ಮಿಕ ಸಾಧನೆಯ ಮೂಲಕ ಆದರ್ಶ ಜೀವನ ನಡೆಸಿದ ಅಕ್ಕಮಹಾದೇವಿ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯರಾಗಿದ್ದಾರೆ. ಹೀಗಾಗಿ ಪುರಾಣ ಪ್ರವಚನಗಳನ್ನು ಆಲಿಸುವುದನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.
ಸಂತೆಕೆಲೂರಿನ ಘನಮಠೇಶ್ವರ ಮಠದ ಮ. ನಿ. ಪ್ರ. ಗುರುಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ತನ್ನಲ್ಲಿನ ಒಳ್ಳೆಯತನ, ಮಾನವೀಯತೆ ಮತ್ತು ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇತರರಿಗೆ ಸಹಾಯ ಮಾಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ಭಾಗದಲ್ಲಿ ನೀರಾವರಿಗೆ ಅವಕಾಶಗಳಿದ್ದರೂ ನೀರಿನ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಹೊಲಗಳಿಗೆ ನೀರು ಹರಿಯಬೇಕಾದ ಸಂದರ್ಭದಲ್ಲಿ ಅವರ ಕಣ್ಣಲ್ಲಿ ರಕ್ತದ ಕಣ್ಣೀರು ಹರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ದೇಶದ ಬೆನ್ನೆಲುಬಾಗಿದ್ದು, ಅವರ ಬದುಕು ಹಸನಾಗಲು ಮುಂದಿನ ದಿನಗಳಲ್ಲಿ ಉತ್ತಮ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಆಶಿಸಿದರು.
‘ನಾನು’ ಎಂಬ ಅಹಂಕಾರ ನರಕಕ್ಕೆ ದಾರಿಯಾದರೆ, ‘ನೀನು’ ಎಂಬ ಪ್ರೀತಿಯ ಭಾವನೆ ಸ್ವರ್ಗಕ್ಕೆ ದಾರಿಯಾಗುತ್ತದೆ. ಅಹಂಕಾರ ಅಳಿದು ಪ್ರೀತಿ ಉಳಿದಾಗ ಮಾತ್ರ ಸಂಬಂಧಗಳಿಗೆ ನಿಜವಾದ ಬೆಲೆ ದೊರೆಯುತ್ತದೆ. ಸ್ವಾರ್ಥ ಮತ್ತು ಅಹಂಕಾರ ಹೆಚ್ಚಾದಾಗ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಪ್ರೀತಿ, ವಿಶ್ವಾಸ ಹಾಗೂ ಪರಸ್ಪರ ಗೌರವ ಬೆಳೆದಾಗ ಸಂಬಂಧಗಳು ಗಟ್ಟಿಯಾಗುತ್ತವೆ. ಎಲ್ಲರ ಬದುಕಿನಲ್ಲಿಯೂ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಹಾರೈಸಿದರು.
ಗಾನಯೋಗಿ, ಶಿವಯೋಗಿ, ಪದ್ಮಭೂಷಣ ಡಾ. ಪಂಡಿತ್ ಪುಟ್ಟರಾಜ ಗುರುವರ್ಯರ ಶಿಷ್ಯತ್ರಯರಲ್ಲಿ ಒಬ್ಬರಾದ ನಂದವಾಡಗಿಯ ವೇ. ಮೂ. ಮಹಾಂತೇಶ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನೀಡುತ್ತಿದ್ದಾರೆ. ಕರೆಗುಡ್ಡದ ಗಾನಕೋಗಿಲೆ ಅಮರೇಶ ಗವಾಯಿಗಳು ಸಾಲಿಮಠ ಅವರು ಪುರಾಣ ಪಠಣ ಮಾಡುತ್ತಿದ್ದು, ನಾಗಡದಿನ್ನಿಯ ಬಸವರಾಜಯ್ಯ ಹಿರೇಮಠ ತಬಲಾ ವಾದನದ ಮೂಲಕ ಸಾಥ್ ನೀಡುತ್ತಿದ್ದಾರೆ. ನವರಸಪೂರ್ಣ ಸಂಗೀತದೊಂದಿಗೆ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.
ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 24ರಂದು ಸಂಜೆ 5 ಗಂಟೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಸುಮಂಗಲಿಯರ ಸಮ್ಮುಖದಲ್ಲಿ ಶ್ರೀಮಠದ ಮಹಾ ರಥೋತ್ಸವ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆಗುಡ್ಡ ಶ್ರೀಮಠದ ಪೀಠಾಧಿಪತಿಗಳಾದ ಷ. ಬ್ರ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮನವಿ ಮಾಡಿದರು.








