ರಾಯಚೂರು: ಆಗುಂಬೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ವೈದ್ಯ ಡಾ. ಚೇತನಕುಮಾರ (28) ಮೃತಪಟ್ಟಿದ್ದಾರೆ. ಎಕ್ಸ್ಯುವಿ ವಾಹನ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ವೈದ್ಯರನ್ನು ಸಿಂಧನೂರು ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಶರಣೇಗೌಡ ಹಂಚಿನಾಳ ಅವರ ಪುತ್ರ ಡಾ. ಚೇತನಕುಮಾರ ಎಂದು ಗುರುತಿಸಲಾಗಿದೆ. ಅವರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಾ. ಚೇತನಕುಮಾರ ಅವರು ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಐವರು ವೈದ್ಯರು ಒಟ್ಟಾಗಿ ಆಗುಂಬೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನವೆಂಬರ್ 1ರ ಬೆಳಗಿನ ಜಾವ ಸುಮಾರು 5.45ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಎಕ್ಸ್ಯುವಿ ವಾಹನವು ಆಗುಂಬೆ ಸಮೀಪ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಸೇವಾ ಮನೋಭಾವದ ಯುವ ವೈದ್ಯನ ಅಕಾಲಿಕ ಸಾವಿನ ಸುದ್ದಿ ಸಿಂಧನೂರು ಹಾಗೂ ಕೆ. ಹೊಸಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.








