ರಾಯಚೂರು: ತಾಲೂಕಿನ ಅಯಿಜಾಪುರ ಗ್ರಾಮದಲ್ಲಿ ವಿಎಸ್ಟಿ ಮತ್ತು ಭವಿಷ್ಯ ಭಾರತ್ ಸಂಸ್ಥೆಯ ವತಿಯಿಂದ ಜಾಗತಿಕ ಕೈತೊಳೆಯುವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭವಿಷ್ಯ ಭಾರತ್ ಸಂಸ್ಥೆಯ ರಾಯಚೂರು ಸಂಯೋಜಕ ಗಂಗಾಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಗುರಿ, ಉದ್ದೇಶಗಳು, ಯೋಜನೆಗಳು ಹಾಗೂ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಭವಿಷ್ಯ ಭಾರತ್ ಸಂಸ್ಥೆ ಮತ್ತು ವಿಎಸ್ಟಿ ಸಂಜೀವಿನಿ ಸಂಚಾರಿ ವೈದ್ಯಕೀಯ ಘಟಕದ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ಆರೋಗ್ಯ, ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಂತರ ಡಾ. ವನಿತಾ ಅವರು ದೈನಂದಿನ ಜೀವನದಲ್ಲಿ ಕೈತೊಳೆಯುವ ಮಹತ್ವದ ಕುರಿತು ಮಾಹಿತಿ ನೀಡಿದರು. ಊಟ ಮಾಡುವ ಮೊದಲು, ಶೌಚಾಲಯ ಬಳಸಿದ ನಂತರ, ಅಡುಗೆ ಮಾಡುವ ಮೊದಲು, ಮಕ್ಕಳಿಗೆ ಆಹಾರ ನೀಡುವ ಮೊದಲು ಹಾಗೂ ಕೆಮ್ಮಿದ ಅಥವಾ ಸೀನಿದ ನಂತರ ಸಾಬೂನು ಮತ್ತು ಶುದ್ಧ ನೀರಿನಿಂದ ಕೈತೊಳೆಯುವುದು ಅತ್ಯಗತ್ಯ ಎಂದು ತಿಳಿಸಿದರು.
ಕೈತೊಳೆಯುವ ಸರಿಯಾದ ವಿಧಾನವನ್ನು ವಿವರಿಸಿದ ಅವರು, ಮೊದಲು ಕೈಗಳನ್ನು ನೀರಿನಿಂದ ಒದ್ದೆ ಮಾಡಿಕೊಂಡು ಸಾಬೂನು ಹಚ್ಚಬೇಕು. ನಂತರ ಅಂಗೈ, ಕೈಗಳ ಹಿಂಭಾಗ, ಬೆರಳುಗಳ ನಡುವಿನ ಭಾಗ, ಹೆಬ್ಬೆರಳು, ಉಗುರುಗಳ ಕೆಳಭಾಗ ಹಾಗೂ ಬೆರಳ ತುದಿಗಳನ್ನು ಚೆನ್ನಾಗಿ ಉಜ್ಜಬೇಕು. ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈಗಳನ್ನು ಉಜ್ಜಿ, ಬಳಿಕ ಶುದ್ಧ ನೀರಿನಿಂದ ತೊಳೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭವಿಷ್ಯ ಭಾರತ್ ಸಂಸ್ಥೆಯ ಸಿಬ್ಬಂದಿಗಳಾದ ಎಂ.ಡಿ. ರೆಹನುಲ್ಲಾ, ಉರುಕುಂದ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.








