ರಾಯಚೂರು: ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ರಾಯಚೂರು ತಾಲ್ಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ VST ಫೌಂಡೇಶನ್ ಹಾಗೂ ಭವಿಷ್ಯ ಭಾರತ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಮೂಳೆ ಮತ್ತು ಕೀಲುಗಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭವಿಷ್ಯ ಭಾರತ್ ಸಂಸ್ಥೆಯ ರಾಯಚೂರು ಯೋಜನಾ ಸಂಯೋಜಕ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಗುರಿ, ಉದ್ದೇಶಗಳು, ವಿವಿಧ ಚಟುವಟಿಕೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು.

ನಂತರ ಡಾ. ವನಿತಾ ಅವರು VST ಸಂಜೀವಿನಿ ಸಂಚಾರಿ ವೈದ್ಯಕೀಯ ಘಟಕದ (MMU) ಮೂಲಕ ಸಾರ್ವಜನಿಕರಿಗೆ ದೊರೆಯುವ ಆರೋಗ್ಯ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಬ್ದುಲ್ ಅಜೀಜ್ ಮಾತನಾಡಿ, ಜಂಬಲದಿನ್ನಿ ಗ್ರಾಮದಲ್ಲಿ ಇಂತಹ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಗ್ರಾಮಸ್ಥರಿಗೆ ಉಪಯುಕ್ತವಾಗಿದೆ. ನಿಯಮಿತ ಆರೋಗ್ಯ ತಪಾಸಣೆಯಿಂದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮಸ್ಥರು ಶಿಬಿರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಗ್ರಾಮದ ಮುಖಂಡ ಅಶೋಕ್ ರೆಡ್ಡಿ ಮಾತನಾಡಿ, ಭವಿಷ್ಯ ಭಾರತ್ ಮತ್ತು VST ಸಂಜೀವಿನಿ ಸಂಸ್ಥೆಗಳ ಜನಪರ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಶಿಬಿರಗಳಿಂದ ಗ್ರಾಮೀಣ ಜನರಿಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಉತ್ತಮ ಅವಕಾಶ ದೊರೆಯುತ್ತದೆ ಎಂದರು.

VST ಸಂಜೀವಿನಿ ಸಂಚಾರಿ ವೈದ್ಯಕೀಯ ಘಟಕವು ತಿಂಗಳಿಗೆ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿ ನಿರಂತರ ಆರೋಗ್ಯ ಸೇವೆ ಒದಗಿಸುತ್ತಿರುವುದು ಪ್ರಶಂಸನೀಯ. ವಿಶೇಷ ಆರೋಗ್ಯ ಶಿಬಿರ ಆಯೋಜಿಸಿ ನಿರಂತರ ಸೇವೆ ನೀಡುತ್ತಿರುವ ಸಂಸ್ಥೆಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಶಿಬಿರದಲ್ಲಿ ಒಟ್ಟು 192 ಜನರು ಭಾಗವಹಿಸಿ ಉಚಿತ ವೈದ್ಯಕೀಯ ಸಮಾಲೋಚನೆ, ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆಯ ಸೌಲಭ್ಯ ಪಡೆದರು. ನಿಯಮಿತ ಆರೋಗ್ಯ ತಪಾಸಣೆ, ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮೂಳೆ ಮತ್ತು ಕೀಲುಗಳ ತಜ್ಞ ವೈದ್ಯೆ ಡಾ. ಮೌನಿಕಾ ಟಿ., ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಬ್ದುಲ್ ಅಜೀಜ್, ಸಮುದಾಯ ಆರೋಗ್ಯ ಅಧಿಕಾರಿ ರಾಮಕಾಂತ, ಐಇಸಿ ವಿಭಾಗದ ಲಕ್ಷ್ಮಣ, ಗ್ರಾಮದ ಮುಖಂಡ ಅಶೋಕ್ ರೆಡ್ಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಭವಿಷ್ಯ ಭಾರತ್ ಸಂಸ್ಥೆಯ ವತಿಯಿಂದ ಗೀತಾ, ಎಂ.ಡಿ. ರೆಹಾನುಲ್ಲಾ ಹಾಗೂ ಉರುಕುಂದ ಉಪಸ್ಥಿತರಿದ್ದರು.

Previous articleಮಕ್ಕಳ ಮೇಲಿನ ಶೋಷಣೆ ತಡೆಗೆ ಶಿಕ್ಷಕರು ಜಾಗೃತರಾಗಿರಬೇಕು: ಕಂಚಿ ಮಾಯಣ್ಣ ಗೌತಮ್
Next articleಕರ್ನಾಟಕದ ಮಾಧ್ಯಮ ವಲಯ ಬಲವರ್ಧನೆಗೆ ಕೇಂದ್ರದ ಒತ್ತು: ಮುಖ್ಯ ಕಾರ್ಯದರ್ಶಿ ಜತೆ ಚಂಚಲ್ ಕುಮಾರ್ ಸಭೆ