ಗದಗ: ಭಾರತೀಯ ಜನತಾ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಪ್ರಜಾಪ್ರಭುತ್ವ, ಅರಾಜಕತೆಯಲ್ಲ’ (Democracy, Not Anarchy) ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ತಿಳಿಸಿದ್ದಾರೆ.
12ನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಪ್ರಬಂಧವು ಕನಿಷ್ಠ 800ರಿಂದ ಗರಿಷ್ಠ 1,200 ಪದಗಳ ಮಿತಿಯಲ್ಲಿರಬೇಕು. ಕಡ್ಡಾಯವಾಗಿ ಎಂಎಸ್ ವರ್ಡ್ನಲ್ಲಿ ಟೈಪ್ ಮಾಡಿರಬೇಕು. ಸಿದ್ಧಪಡಿಸಿದ ಪ್ರಬಂಧವನ್ನು ಪ್ರಕಟಣೆಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ www.bjym-essay.app ವೆಬ್ಸೈಟ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ತಡವಾಗಿ ಸಲ್ಲಿಸುವ ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ.
ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದ ಐವರು ವಿಜೇತರಿಗೆ ತಲಾ ₹1 ಲಕ್ಷ, ಪ್ರತಿ ರಾಜ್ಯದ ಮೂವರು ವಿಜೇತರಿಗೆ ತಲಾ ₹51 ಸಾವಿರ ಹಾಗೂ ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ ಒಬ್ಬ ವಿಜೇತರಿಗೆ ₹11 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರೋಹನಕುಮಾರ (9620762004) ಅಥವಾ ವಿಶ್ವನಾಥ (9538465517) ಅವರನ್ನು ಸಂಪರ್ಕಿಸುವಂತೆ ಸಂತೋಷ ಅಕ್ಕಿ ಕೋರಿದ್ದಾರೆ.








