Eshwar Kumar kandoo

ರಾಯಚೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಅಕ್ಕ ಕೆಫೆಗಳ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಾದ್ಯಂತ ಒಟ್ಟು 8 ಅಕ್ಕ ಕೆಫೆಗಳನ್ನು ಯಶಸ್ವಿಯಾಗಿ ಸ್ಥಾಪಿಸುವ ಮೂಲಕ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಅಕ್ಕ ಕೆಫೆಗಳನ್ನು ಹೊಂದಿದ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು, ಈ ಸಾಧನೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರು ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಗ್ರಾಮೀಣ ಪ್ರದೇಶಗಳ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಕೃಷಿಯೇತರ ವಲಯದಲ್ಲಿ ಉದ್ಯಮಶೀಲತಾ ಅವಕಾಶಗಳನ್ನು ಕಲ್ಪಿಸುವುದು, ನವೀನ ಉದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವುದು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಸ್ಥಿರ ಜೀವನೋಪಾಯಕ್ಕೆ ನೆರವಾಗುವುದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಅಕ್ಕ ಕೆಫೆಗಳ ಮೂಲಕ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸ್ವಂತ ಉದ್ಯಮ ನಡೆಸಲು ಅವಕಾಶ ಕಲ್ಪಿಸುವುದರ ಜೊತೆಗೆ ಅವರ ಆದಾಯ ವೃದ್ಧಿ, ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿರುವ ರಾಯಚೂರು ಜಿಲ್ಲೆಯ ಕಾರ್ಯವೈಖರಿಯನ್ನು ಅಭಿಯಾನ ನಿರ್ದೇಶಕರು ಶ್ಲಾಘಿಸಿದ್ದಾರೆ.

ಜಿಲ್ಲೆಯಲ್ಲಿ 8 ಅಕ್ಕ ಕೆಫೆಗಳ ಅನುಷ್ಠಾನವು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ್ ಕಾಂದೂ ಅವರ ಸಮರ್ಥ ನಾಯಕತ್ವ, ಮಾರ್ಗದರ್ಶನ ಮತ್ತು ಬದ್ಧತೆಯೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸ್ವ-ಸಹಾಯ ಗುಂಪುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸಂಘಟಿತ ಪ್ರಯತ್ನದ ಫಲವಾಗಿದೆ ಎಂದು ಪ್ರಶಂಸನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿಯೂ ಅಕ್ಕ ಕೆಫೆಗಳ ಸುಸ್ಥಿರ ಕಾರ್ಯನಿರ್ವಹಣೆ, ಗುಣಮಟ್ಟದ ಸೇವೆ, ಉದ್ಯಮಗಳ ಬೆಳವಣಿಗೆ ಹಾಗೂ ಗ್ರಾಮೀಣ ಮಹಿಳೆಯರ ಜೀವನೋಪಾಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದೇ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಅಭಿಯಾನ ನಿರ್ದೇಶಕರು ಆಶಯ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಮಹಿಳೆಯರ ಉದ್ಯಮಶೀಲತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಿರುವ ರಾಯಚೂರು ಜಿಲ್ಲೆಯ ಈ ಸಾಧನೆ ಜಿಲ್ಲೆಯ ಅಭಿವೃದ್ಧಿಯ ಪ್ರಯತ್ನಗಳಿಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

Previous articleಜನಜಾತಿ ಸಮಾಜದ ಇತಿಹಾಸ, ಸಂಸ್ಕೃತಿ ಮತ್ತು ತ್ಯಾಗಕ್ಕೆ ರಾಷ್ಟ್ರೀಯ ಗೌರವ: ರೂಪಾ ನಾಯಕ್
Next articleವಾಲ್ಮೀಕಿ ವಿವಿ ಮೌಲ್ಯಮಾಪನ ಕುಲಸಚಿವ ಆಗಿ ಡಾ.ವಿರುಪಾಕ್ಷಯ್ಯ ಅಧಿಕಾರ ಸ್ವೀಕಾರ