ರಾಯಚೂರು: ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೇತಾಜಿ ನಗರ ಠಾಣೆ ಪೊಲೀಸರು ಬಂಧಿಸಿ, 38 ಲೀಟರ್ ಸೇಂದಿಯನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಅಶೋಕ ನಗರ ಬಡಾವಣೆಯಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಈ ವೇಳೆ ಸೇಂದಿ ಖರೀದಿಸಲು ಬಂದಿದ್ದವರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ, ಮಾರಾಟದಲ್ಲಿ ತೊಡಗಿದ್ದ ಜಾಫರ್ ಸಾಧಿಕ್ (43) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಬಳಿಯಿದ್ದ ಮೂರು ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ತಲಾ ಒಂದು ಲೀಟರ್‌ನ 38 ಪ್ಲಾಸ್ಟಿಕ್ ಬಾಟಲಿಗಳಲ್ಲಿನ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 760 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಾರಾಟದ ಹಣವೆಂದು ಶಂಕಿಸಲಾದ 180 ರೂ. ನಗದನ್ನೂ ಜಪ್ತಿ ಮಾಡಲಾಗಿದೆ.

ಈ ಸಂಬಂಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 90/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 123, 275, 286 ಹಾಗೂ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Previous articleಕಾರ್ತಿಕ ಪೂರ್ಣಿಮೆ: ನ.24ರಂದು ಮಂತ್ರಾಲಯದಲ್ಲಿ ತುಂಗಾರತಿ, ಲಕ್ಷದೀಪೋತ್ಸವ
Next articleಕುಡಿಯುವ ನೀರಿಗಾಗಿ ಪರದಾಟ: ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು