ತುಂಗಾರತಿಯ ಎಐ ಚಿತ್ರ

ಮಂತ್ರಾಲಯ: ಕಾರ್ತಿಕ ಪೂರ್ಣಿಮೆಯ ಅಂಗವಾಗಿ ನವೆಂಬರ್ 24ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ‘ತುಂಗಾರತಿ–ಪುಣ್ಯನದಿ ಹಾರತಿ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ 108 ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದ ಅಂಗವಾಗಿ ಶ್ರೀಮಠದಿಂದ ಶ್ರೀ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತುಂಗಭದ್ರಾ ನದಿ ತೀರಕ್ಕೆ ಕರೆತರಲಾಗುವುದು. ಬಳಿಕ ಶ್ರೀಪಾದಂಗಳವರು ನದಿ ಪೂಜೆ ಹಾಗೂ ಹಾರತಿ ನೆರವೇರಿಸಲಿದ್ದು, ನಂತರ ಅರ್ಚಕರಿಂದ ಪಂಚ ಹಾರತಿಗಳನ್ನು ಸಮರ್ಪಿಸಲಾಗುವುದು.

ಪುಣ್ಯ ಕಾರ್ಯಕ್ರಮದ ಅಂಗವಾಗಿ ನದಿ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಭಕ್ತಾದಿಗಳಿಂದ ಲಕ್ಷದೀಪೋತ್ಸವವೂ ನೆರವೇರಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಂಗಾರತಿ, ಭಜನೆ ಹಾಗೂ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಶ್ರೀಹರಿ, ವಾಯು ಹಾಗೂ ಗುರುಗಳ ಪರಿಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ವತಿಯಿಂದ ವಿನಂತಿಸಲಾಗಿದೆ.

Previous articleವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
Next articleಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ – 38 ಬಾಟಲಿ ವಶ, ಆರೋಪಿ ಬಂಧನ