ಸಿರವಾರ: ಬುದ್ಧ ಪ್ರಜ್ಞಾ ಸಮೂಹ, ಸಿರವಾರ ತಾಲೂಕು ಘಟಕದ ವತಿಯಿಂದ ಪಟ್ಟಣದ ವಿದ್ಯಾನಗರದಲ್ಲಿ ಇಂದು ಸಂಜೆ ಧಮ್ಮ ದೀಪ ದಾನೋತ್ಸವ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಭಾವಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಭಗವಾನ್ ಬುದ್ಧರ ಜ್ಞಾನದ ಬೆಳಕನ್ನು ಸ್ಮರಿಸಲಾಯಿತು. ವಿದ್ಯಾನಗರ ಕಾಲೋನಿಯ ಧಮ್ಮ ಶಾಲೆಯ ಮಕ್ಕಳು ಸೇರಿದಂತೆ ನೂರಾರು ಧಮ್ಮ ಉಪಾಸಕರು, ಸಾರ್ವಜನಿಕರು ದೀಪಗಳನ್ನು ಹಿಡಿದು ಬುದ್ಧನಿಗೆ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಚನ್ನಬಸವ ಸಿರವಾರ ಅವರು ಧಮ್ಮ ದೀಪ ದಾನೋತ್ಸವದ ಐತಿಹಾಸಿಕ ಮಹತ್ವವನ್ನು ವಿವರಿಸಿದರು.

“ಭಗವಾನ್ ಬುದ್ಧರು ಜ್ಞಾನೋದಯ ಹೊಂದಿದ ನಂತರ 18 ವರ್ಷಗಳ ಕಾಲ ಸುದೀರ್ಘವಾಗಿ ದುಃಖಕ್ಕೆ ಪರಿಹಾರ ನೀಡುವ ಜ್ಞಾನದ ಮಾರ್ಗವನ್ನು ಬೋಧಿಸಿದರು. ಆ ನಂತರ ಮೊದಲ ಬಾರಿಗೆ ಕಪಿಲವಸ್ತುವಿಗೆ ಬಂದಾಗ ಕಪಿಲವಸ್ತುವಿನ ಲಕ್ಷಾಂತರ ಜನರು ಕೈಯಲ್ಲಿ ದೀಪ ಹಿಡಿದು, ಜಗತ್ತಿನ ದುಃಖಕ್ಕೆ ಪರಿಹಾರ ಕಂಡುಹಿಡಿದ ತಥಾಗತ ಭಗವಾನರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಮುಂದೆ ಸಾಮ್ರಾಟ್ ಅಶೋಕನು ಭಾರತದಾದ್ಯಂತ ಸುಮಾರು 84,000 ಬೌದ್ಧ ಸ್ತೂಪಗಳನ್ನು ನಿರ್ಮಿಸಿ, ಕಾರ್ತಿಕ ಮಾಸದ ಈ ದಿನದಂದು ಎಲ್ಲಾ 84,000 ಸ್ತೂಪಗಳಲ್ಲಿ ದೀಪ ಬೆಳಗಿಸುವ ಮೂಲಕ ಅವುಗಳನ್ನು ಉದ್ಘಾಟಿಸಿದನು. 

ಅಂದಿನಿಂದ ಈ ದೀಪಾವಳಿಯು ಬೌದ್ಧರ ಪಾಲಿಗೆ ಬೆಳಕಿನ ಹಬ್ಬವಾಗಿ, ಜ್ಞಾನದ ಹಬ್ಬವಾಗಿ ಆಚರಿಸಲ್ಪಡುತ್ತಾ ಬಂದಿದೆ” ಎಂದು ಅವರು ಹೇಳಿದರು.

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನ, ಕರುಣೆ, ಮೈತ್ರಿಯ ಬೆಳಕನ್ನು ಹರಡುವುದೇ ಈ ಹಬ್ಬದ ನಿಜವಾದ ಸಂದೇಶ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ  ಗುರುಪ್ಪ, ರಮೇಶ, ಶ್ರೀಕಾಂತ್, ಮೆಷಾಕ್, ಮಲ್ಲಯ್ಯ, ವಿದ್ಯಾನಗರ ಕಾಲೋನಿಯ ಧಮ್ಮ ಶಾಲೆಯ ಮಕ್ಕಳು, ಧಮ್ಮ ಉಪಾಸಕರು, ಕಾಲೋನಿಯ ಸಾರ್ವಜನಿಕರು ಹಾಗೂ ಸಿರವಾರ ತಾಲೂಕಿನ ವಿವಿಧ ವಾರ್ಡ್‌ಗಳ ಧಮ್ಮ ಉಪಾಸಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Previous articleವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ
Next articleತಹಸೀಲ್ದಾರ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ