ಸಿರವಾರ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ ಅಶೋಕ ಪವಾರ ಅವರು ವೀರವನಿತೆ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ತಹಸೀಲ್ದಾರ ಅಶೋಕ ಪವಾರ ಅವರು, “ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವ ತನ್ನದೇ ಆದ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ಇಂದಿಗೂ ಹೆಣ್ಣು ಮಕ್ಕಳಿಗೆ ದೊಡ್ಡ ಸ್ಫೂರ್ತಿ” ಎಂದು ಹೇಳಿದರು.

“ಶತ್ರು ಸೈನಿಕರು ಕೋಟೆಯನ್ನು ಮುತ್ತಿ, ರಹಸ್ಯ ಮಾರ್ಗದ ಮೂಲಕ ಒಳ ನುಗ್ಗಲು ಯತ್ನಿಸಿದಾಗ, ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದರೂ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿದ ವೀರನಾರಿ ಅವರು. ಇಂತಹ ಮಹಾನ್ ವೀರನಾರಿಯ ಚರಿತ್ರೆಯನ್ನು ಮನೆ ಮನೆಗೆ, ಶಾಲೆ ಶಾಲೆಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕು. ಇಂದಿನ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣು ಮಕ್ಕಳು ಓಬವ್ವನ ಧೈರ್ಯ, ಸಾಹಸ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.

ವಿವಿಧ ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಅಬ್ದುಲ್ ವಾಹೀದ್, ಶಿರಸ್ತೆದಾರ ಜುಬೇರ್ ಸಾಬ್, ಪಕೃದ್ಧಿನ್, ಕಂದಾಯ ನಿರೀಕ್ಷಕ ಶ್ರೀನಾಥ, ಎಫ್‌ಡಿಎ ಈರೇಶ, ಅಮರ, ಸಮಾಜದ ಮುಖಂಡರಾದ ಲಂಕೇಶ ಮರಾಠ, ಮಲ್ಲಯ್ಯ, ಗುರುಪ್ಪ, ಹನುಮೇಶ, ರಮೇಶ, ಮೌನೇಶ, ಶಶಿಕಾಂತ್ ಸೇರಿದಂತೆ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Previous articleವಿದ್ಯಾನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಧಮ್ಮ ದೀಪ ದಾನೋತ್ಸವ
Next articleದೀಪಾವಳಿ ಪಾಡ್ಯದ ಅಂಗವಾಗಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಶಾಸಕರಿಂದ ಗೋ ಪೂಜೆ