ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಆತಂಕವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.
ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ರೇಣುಕ ಯಲ್ಲಮ್ಮ ದೇವಿ ದೇವಸ್ಥಾನದ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನೀರಾವರಿ ವ್ಯಾಪ್ತಿಗೆ ಒಳಪಟ್ಟಿರುವ ಡಿಸ್ಟ್ರಿಬ್ಯೂಟರ್ 82ರಲ್ಲಿ ನವೆಂಬರ್ 10ರಿಂದ ಆರು ದಿನಗಳ ವಾರಬಂಧಿ ಪ್ರಾರಂಭವಾಗಿದ್ದರೂ ನೀರಮಾನ್ವಿ ಭಾಗಕ್ಕೆ ಅಲ್ಪ ಪ್ರಮಾಣದ ನೀರು ಮಾತ್ರ ಹರಿದು ಬಂದಿದೆ. ಪಿ.ಒ. 308ರಿಂದ ಕೆಳಭಾಗದಲ್ಲಿರುವ ಒಂಬತ್ತು ಪೈಪುಗಳಿಗೆ ಸಂಬಂಧಿಸಿದ ಜಾನೇಕಲ್, ಮಲ್ಲಿಗೆಮಡುವು, ನಸಲಾಪುರ, ಅಮರಾವತಿ ಹಾಗೂ ಡಿ.ನಂ. 82/3ರ ಕರೇಗುಡ್ಡ, ಬೆಟ್ಟದೂರು, ಬೆಟ್ಟದೂರು ತಾಂಡ ಸೇರಿದಂತೆ ಕೆಳಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ ಎಂದು ದೂರಿದರು.
ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕವಾಗಿ ನೀರು ಒದಗಿಸದ ಕಾರಣ ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ಸುಮಾರು 3 ಸಾವಿರ ಎಕರೆ ಪ್ರದೇಶದ ರೈತರು ಬೆಳೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಳಭಾಗಕ್ಕೆ ವಾರಬಂಧಿ ಜಾರಿಯಲ್ಲಿರುವ ಸಂದರ್ಭದಲ್ಲಿ ಮೇಲ್ಭಾಗದ ಪಿ.ಒ. 127, 174 ಮತ್ತು 189ರಿಂದ ಕೆಲ ರೈತರು ಅಕ್ರಮವಾಗಿ ಕಾಲುವೆ ನೀರು ಪಡೆಯುತ್ತಿದ್ದಾರೆ. ಈ ಕುರಿತು ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ ಅವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಲ್ಲದೆ, ಡಿಸ್ಟ್ರಿಬ್ಯೂಟರ್ 76/1, 76/2, 76/5 ಮತ್ತು 76/6 ಬ್ರಾಂಚ್‌ಗಳ ಕೆಳಭಾಗದಲ್ಲಿಯೂ ನೀರಿಲ್ಲದೆ ಜೋಳದ ಬೆಳೆಗಳು ಒಣಗುತ್ತಿವೆ. ಕಾಲುವೆಗಳಲ್ಲಿನ ಜಂಗಲ್ ಕ್ಲಿಯರೆನ್ಸ್ ಹಾಗೂ ಸರ್ವಿಸ್ ರಸ್ತೆಗಳ ದುಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ, ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸುವ ಕುರಿತು ರೈತ ಮುಖಂಡರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಆಡಳಿತದಿಂದ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿಯೂ ಕಾಲುವೆಗಳಿಗೆ ನೀರು ಬಿಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಅಕ್ರಮವಾಗಿ ನೀರು ಪಡೆಯುತ್ತಿರುವ ಜಮೀನುಗಳ ಸರ್ವೆ ನಂಬರ್‌ಗಳ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಗೆ ಲಿಖಿತ ದೂರು ನೀಡಿದರೆ, ಅಂತಹ ಜಮೀನುಗಳಿಗೆ ಫಾರಂ 11 ಜಾರಿಗೊಳಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ನೀರು ಹರಿಸುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಿ ಕಾಲುವೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಂಧನೂರು ಗ್ರಾಮೀಣ ಡಿವೈಎಸ್ಪಿ ಚಂದ್ರಶೇಖರ, ನೀರಾವರಿ ಇಲಾಖೆಯ ಎಸ್‌ಇ ಸತ್ಯನಾರಾಯಣ ಶೆಟ್ಟಿ, ಸಿರವಾರ ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ, ರೈತ ಮುಖಂಡ ಶಂಕರಗೌಡ ಹರಿವಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡಬಸವನಗೌಡ ಬಲ್ಲಟ್ಟಗಿ, ರಾಜ್ಯ ಕಾರ್ಯದರ್ಶಿ ಸೂಗುರಯ್ಯ ಆರ್.ಎಸ್. ಮಠ, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಮಾಲಿಪಾಟೀಲ್, ಲಿಂಗಾರೆಡ್ಡಿ ಪಾಟೀಲ್, ಜೆ. ಚಾಮರಸ ಮಾಲಿಪಾಟೀಲ್, ಬಸವರಾಜ ತಡಕಲ್, ಶರಣಪ್ಪಗೌಡ ಗವಿಗಟ್ಟ, ದೊಡ್ಡ ದೇವೇಂದ್ರಪ್ಪ, ಹೆಚ್. ಶಂಕರಪ್ಪ ದೇವತಗಲ್, ಶಂಭನಗೌಡ ಚಿಕ್ಕಕೊಟ್ನೆಕಲ್, ಚಂದ್ರಶೇಖರ ಕಾಗಿ, ಮಹೆಬೂಬ್ ಗೋರ್ಕಾಲ್, ವೀರೇಶ ಗವಿಗಟ್ಟ, ಬಸವರಾಜ ಉಪ್ಪಾರ ಜಾನೇಕಲ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.








