ರಾಯಚೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಫ್ಲೋರಸೆನ್ಸ್ ಗೈಡೆಡ್ ಮತ್ತು ರೊಬೋಟಿಕ್ ತಂತ್ರಜ್ಞಾನ ಬಳಕೆಯಿಂದ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ನಿರ್ವಹಿಸಲು ಸಾಧ್ಯವಾಗುತ್ತಿದ್ದು, ಕಡಿಮೆ ನೋವು, ಕಡಿಮೆ ಔಷಧೋಪಚಾರ ಹಾಗೂ ಶೀಘ್ರ ಚೇತರಿಕೆಗೆ ಸಹಕಾರಿಯಾಗಿದೆ ಎಂದು ಹೈದರಾಬಾದ್‌ನ ಯಶೋಧಾ ಕ್ಯಾನ್ಸರ್ ಆಸ್ಪತ್ರೆಯ ರೊಬೋಟಿಕ್ ತಜ್ಞ ಡಾ. ಚಿನ್ನಬಾಬು ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯಲ್ಲಿ ಕಳೆದ ಒಂದು ದಶಕದಿಂದ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮಾರ್ಟ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸಂಯೋಜನೆಯೊಂದಿಗೆ ಚಿಕಿತ್ಸೆ ಒದಗಿಸುವುದರಿಂದ ದೇಹದ ಆರೋಗ್ಯಕರ ಅಂಗಾಂಶಗಳನ್ನು ಸಂರಕ್ಷಿಸುವುದರ ಜತೆಗೆ ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತಿದೆ ಎಂದರು.
ಸ್ತ್ರೀರೋಗ ಸಂಬಂಧಿತ ಕ್ಯಾನ್ಸರ್‌ಗಳಿಗೆ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ರೋಗಿಗಳು ಐದಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತಿತ್ತು. ಆದರೆ, ಆಧುನಿಕ ರೊಬೋಟಿಕ್ ತಂತ್ರಜ್ಞಾನದಿಂದ ಇದೀಗ 24 ಗಂಟೆಯೊಳಗೆ ಶಸ್ತ್ರಚಿಕಿತ್ಸೆ ನಿರ್ವಹಿಸಿ ರೋಗಿಗಳನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸ್ತನ ಕ್ಯಾನ್ಸರ್ ಸೇರಿದಂತೆ ಮೂತ್ರಕೋಶ, ಮೂತ್ರಪಿಂಡ ಹಾಗೂ ಅಡ್ರಿನಲ್ ಗ್ರಂಥಿಯ ಕ್ಯಾನ್ಸರ್‌ಗಳಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೊರೆಕ್ಟಲ್ ಕ್ಯಾನ್ಸರ್ ಮತ್ತು ಥೋರಾಸಿಕ್ ಶಸ್ತ್ರಚಿಕಿತ್ಸೆಯಲ್ಲಿಯೂ ನವೀನ ತಂತ್ರಜ್ಞಾನ ಬಳಕೆಯಾಗುತ್ತಿದೆ. ಫ್ಲೋರಸೆನ್ಸ್ ಡೈ ತಂತ್ರಜ್ಞಾನದಿಂದ ರೋಗಪೀಡಿತ ಅಂಗಾಂಶಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಕಡಿಮೆ ನೋವು ಮತ್ತು ಕಡಿಮೆ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗುತ್ತಿದೆ ಎಂದರು.
ಎಲ್ಲ ಸಂದರ್ಭಗಳಲ್ಲಿಯೂ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಆಧುನಿಕ ಚಿಕಿತ್ಸಾ ವಿಧಾನಗಳು ರೋಗಿಗಳ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿವೆ. ಸಾರ್ವಜನಿಕರು ಇಂತಹ ನವೀನ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಉಪಸ್ಥಿತರಿದ್ದರು.








