ರಾಯಚೂರು: ನಗರದ ವಾರ್ಡ್‌-16ರ ಜಿ.ಟಿ. ತೋಟ 2ನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಆದಿಲಕ್ಷ್ಮಿ ಅವರಿಗೆ ಅಂಗನವಾಡಿ ಕೇಂದ್ರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಬಸಮ್ಮ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಸಮಾಜದ ಅಭಿವೃದ್ಧಿಯಲ್ಲಿ ಅತ್ಯಂತ ಅಮೂಲ್ಯವಾದದ್ದು. ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದಿಲಕ್ಷ್ಮಿ ಅವರು ಮಕ್ಕಳ ಹಾಗೂ ಕುಟುಂಬಗಳ ಅಭಿವೃದ್ಧಿಗಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಅವರ ಕಾರ್ಯ ಎಲ್ಲರಿಗೂ ಆದರ್ಶವಾಗಿದೆ ಎಂದು ಪ್ರಶಂಸಿಸಿದರು.

ಪ್ರಜಾಪ್ರಗತಿ ವರದಿಗಾರ ಮಹ್ಮದ್ ಸಾಧಿಕ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ. ಆದಿಲಕ್ಷ್ಮಿ ಅವರು ತಮ್ಮ ಸೇವಾವಧಿಯಲ್ಲಿ ಸಾವಿರಾರು ಮಕ್ಕಳು ಹಾಗೂ ಕುಟುಂಬಗಳ ವಿಶ್ವಾಸ ಗಳಿಸಿದ್ದು, ಅವರ ನಿಸ್ವಾರ್ಥ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಅವರ ನಿವೃತ್ತಿ ಜೀವನ ಸುಖ, ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಮಂಗಳವಾರಪೇಟೆ ಅಂಗನವಾಡಿ ಕಾರ್ಯಕರ್ತೆ ಮಹಬೂಬ್ ಬಿ. ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದಿಲಕ್ಷ್ಮಿ ಅವರು ಕರ್ತವ್ಯವನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಸೇವೆಯಾಗಿ ಸ್ವೀಕರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇಂತಹ ಸೇವೆಯನ್ನು ಸಮಾಜ ಸದಾ ಗೌರವದಿಂದ ಸ್ಮರಿಸುತ್ತದೆ. ಅವರ ಮುಂದಿನ ಜೀವನ ಸಂತೋಷ, ಆರೋಗ್ಯ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗ್ಮಾ, ನಸೀಮಾ, ಇರ್ಫಾನ್, ಇಂದು, ಈರಮ್ಮ, ಅಂಬಿಕಾ, ಮಲ್ಲಿಕಾರ್ಜುನ್, ಸದ್ದಾಂ ಹುಸೇನ್, ಅಂಗನವಾಡಿ ಕಾರ್ಯಕರ್ತೆ ಕೃಷ್ಣವೇಣಿ, ಮಹಬೂಬ್ ಬಿ., ರಾಧಾ, ಕಿಶೋರಿಯರಾದ ತಬಸುಮ್, ನಜರೇನ್ ಸೇರಿದಂತೆ ಏರಿಯಾದ ಮಕ್ಕಳ ತಾಯಂದಿರು ಹಾಗೂ ಹಲವರು ಉಪಸ್ಥಿತರಿದ್ದರು.

Previous articleಕಬಡ್ಡಿ ಸ್ಪರ್ಧೆಯಲ್ಲಿ ಬಸವೇಶ್ವರ ಪಿಯು ಕಾಲೇಜಿನ ಭರ್ಜರಿ ಸಾಧನೆ
Next articleಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಆಚರಣೆಯ ಮಹತ್ವ