ರಾಯಚೂರು ರಕ್ತದಾನ ಶಿಬಿರ
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಎ. ವಸಂತಕುಮಾರ, ಡಾ. ಶಿವರಾಜ ಪಾಟೀಲ ಚಾಲನೆ ನೀಡಿದರು.

ರಾಯಚೂರು: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ರೋಟರಿ ಜನಸೇವಾ ಪ್ರತಿಷ್ಠಾನದ ರಕ್ತ ಕೇಂದ್ರದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಹಾಗೂ ಶಾಸಕ ಡಾ. ಶಿವರಾಜ ಪಾಟೀಲ ಶಿಬಿರಕ್ಕೆ ಚಾಲನೆ ನೀಡಿದರು. ರಾಯಚೂರು ರಕ್ತದಾನ ಶಿಬಿರ

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಅದ್ಧೂರಿ ಆಚರಣೆಗೆ ಬದಲಾಗಿ ರಕ್ತದಾನದಂತಹ ಸಮಾಜಮುಖಿ ಕಾರ್ಯದ ಮೂಲಕ ಬೆಳ್ಳಿ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ರಕ್ತದಾನದಿಂದ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ನೆರವಾಗಲಿದೆ ಎಂದರು.

ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ರಕ್ತದಾನ ಅತ್ಯಂತ ಮಹತ್ವದ್ದಾಗಿದೆ. ರಕ್ತದ ವಿವಿಧ ಘಟಕಗಳಾದ ಪ್ಲೇಟ್‌ಲೆಟ್‌ಗಳು, ತಾಜಾ ಹೆಪ್ಪುಗಟ್ಟಿದ ಪ್ಲಾಸ್ಮಾ ಹಾಗೂ ಕೆಂಪು ರಕ್ತಕಣಗಳ ಬಳಕೆ ಮತ್ತು ಸಂರಕ್ಷಣೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ ರಕ್ತದ ಘಟಕಗಳ ಲಭ್ಯತೆ ಹೆಚ್ಚಿಸುವ ಅಗತ್ಯವಿದೆ. ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ರೋಗಿಗಳು ಸಂಕಷ್ಟ ಎದುರಿಸುವ ಸಾಧ್ಯತೆಯಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನಿಮಿಷಕ್ಕೊಂದರಂತೆ ರಕ್ತದ ಬಾಟಲಿಗಳನ್ನು ಪೂರೈಸಬೇಕಾದ ಪರಿಸ್ಥಿತಿ ಎದುರಾಗಿದ್ದನ್ನು ಸ್ಮರಿಸಿದ ಅವರು, ರಕ್ತದಾನವು ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ ಎಂದರು.

ರೋಟರಿ ಕ್ಲಬ್ ಜಿಲ್ಲಾ ಗೌರ್ನರ್ ತ್ರಿವಿಕ್ರಮ್ ಜೋಶಿ ಮಾತನಾಡಿ, ಅಗತ್ಯವಿರುವ ಸಂದರ್ಭದಲ್ಲಿ ರಕ್ತ ದೊರೆಯದೆ ಸಮಸ್ಯೆ ಎದುರಾಗುತ್ತಿದೆ. ರಕ್ತದಾನಿಗಳ ಕೊರತೆಯಿಂದಾಗಿ ಹೊಸಪೇಟೆ ಮತ್ತು ಬೆಂಗಳೂರಿನಿಂದಲೂ ರಕ್ತ ಸಂಗ್ರಹಿಸಬೇಕಾದ ಪರಿಸ್ಥಿತಿಯಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನದ ಮೂಲಕ ಹಲವು ರೋಗಿಗಳ ಜೀವ ಉಳಿಸಲು ಸಾಧ್ಯವಿದೆ. ರಿಪೋರ್ಟರ್ಸ್ ಗಿಲ್ಡ್‌ನ ಈ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಮಾತನಾಡಿ, ಗಿಲ್ಡ್‌ಗೆ 25 ವರ್ಷಗಳು ಪೂರ್ಣಗೊಂಡಿದ್ದು, ಬೆಳ್ಳಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಗಿಲ್ಡ್ ಪತ್ರಕರ್ತರ ಸಂಸ್ಥೆಯಾಗಿದ್ದರೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದರು.

ಅ. 30ರಂದು ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಮರಾವ್ ಗಣೇಕಲ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಕುಕನೂರು, ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ವೆಂಕಟೇಶ ಹೂಗಾರ ಸೇರಿದಂತೆ ಹಿರಿಯ-ಕಿರಿಯ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಉಪಸ್ಥಿತರಿದ್ದರು.

Previous articleಬರ ಪರಿಸ್ಥಿತಿ: ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರ ರಕ್ಷಣೆಗೆ ಸರ್ಕಾರ ಬದ್ಧ: ಡಾ. ಜಿ. ಪರಮೇಶ್ವರ
Next articleಗಾಣೇಕಲ್ ಜಲಾಶಯದಿಂದ ನೀರು ಬಿಡುಗಡೆ: ಕುಡಿಯುವ ನೀರು, ಬೆಳೆಗಳಿಗೆ ನೀರಾವರಿಗೆ ಆದ್ಯತೆ