ರಾಯಚೂರು: ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರದಲ್ಲಿ ಭಿಕ್ಷಾಟನೆ ನಿಷೇಧ ಜಾಗೃತಿ ಹಾಗೂ ಪುನರ್ವಸತಿ ಕುರಿತ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಜಾಗೃತಿ ಅಭಿಯಾನದ ಭಾಗವಾಗಿ ಅ.19ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿರಾಶಿತರ ಕೇಂದ್ರದ ವಾರ್ಡನ್ ಆದೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಓಂ ಸಾಯಿ ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ್ ಆದೋನಿ ಅವರ ಸಾನ್ನಿಧ್ಯದಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಕಿರಣ್ ಆದೋನಿ, ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹಾಗೂ ನಿರ್ಗತಿಕರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಭಿಕ್ಷಾಟನೆಯ ಸಮಸ್ಯೆ ನಿವಾರಿಸಿ, ನಿರ್ಗತಿಕರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡುವ ಮೂಲಕ ಭಿಕ್ಷಾಟನೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಅಭಿಯಾನದಡಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಗೌರವಯುತ ಪುನರ್ವಸತಿ, ಕೌಶಲ್ಯ ತರಬೇತಿ, ಜೀವನೋಪಾಯಕ್ಕೆ ಅಗತ್ಯ ಬೆಂಬಲ ಹಾಗೂ ಆಪ್ತಸಮಾಲೋಚನೆ ಒದಗಿಸುವ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶ ಹೊಂದಲಾಗಿದೆ.

ಸಾರ್ವಜನಿಕರು ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರು ಅಥವಾ ನಿರಾಶ್ರಿತರನ್ನು ಕಂಡಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಇದಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ 10581 ಹಾಗೂ ಸಹಾಯವಾಣಿ ಸಂಖ್ಯೆ 94823 00400 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಓಂ ಸಾಯಿ ಧ್ಯಾನ ಮಂದಿರವು ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಅನ್ನದಾನ, ಮಾನವೀಯ ಸೇವೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ ಇರ್ಷಾದ್ ಮಿಯಾ, ಜಮ್ಲಪ್ಪ, ವೀರೇಶ್, ತಾಯಿರಾಜ್, ರಜಿಯಾ ಬೇಗಂ, ಲಕ್ಷ್ಮಿ ಸೇರಿದಂತೆ ಅನೇಕ ಸಾಯಿ ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Previous articleರಾಯಚೂರಿನ ಸಿದ್ಧಾಂಪೂರಿನಲ್ಲಿ ರಾಷ್ಟ್ರಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ ಅ.20ರಂದು
Next articleರಾಯಚೂರು ದಸರಾ ಕವಿಗೋಷ್ಠಿ: ಪರಿಸರ ಜಾಗೃತಿಗೆ ಕರೆ