ಅರಕೇರಾ : ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಸ್ಪರ್ಧೆಯಲ್ಲೂ ಸೋಲು-ಗೆಲುವು ಸಹಜ. ಗೆಲುವು ನಿಶ್ಚಿತವಲ್ಲ, ಸೋಲು ಅಂತಿಮವಲ್ಲ. ಸೋತವರು ಹತಾಶರಾಗದೆ ಮುಂದಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ ಮತ್ತು ಪ್ರತಿಭೆಯನ್ನು ಧೈರ್ಯದಿಂದ ಪ್ರದರ್ಶಿಸಬೇಕು. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಅವರಲ್ಲಿನ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಮಂಜುನಾಥ ಪೂಜಾರಿ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಲು ವರ್ಷವಿಡೀ ಶ್ರಮಿಸುತ್ತಾರೆ. ಆದರೆ ಕೇವಲ ಪಠ್ಯಪುಸ್ತಕದ ವಿಷಯಗಳನ್ನು ಕಲಿತರೆ ಸಾಲದು, ಮಕ್ಕಳಲ್ಲಿನ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಕ್ಕೂ ಪ್ರೋತ್ಸಾಹ ನೀಡಬೇಕು. ಓದಿನ ಮೂಲಕ ಕಷ್ಟವೆನಿಸುವ ವಿಷಯಗಳನ್ನು ಹಾಡು ಹಾಗೂ ಕಲಾ ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಯಬಹುದು ಎಂದು ಹೇಳಿದರು.

ಸಿಆರ್ ಪಿ ಬಸವರಾಜ, ಶಿಕ್ಷಕರಾದ ಸಂಗಪ್ಪ ಕೋಟೆಕಲ್, ಅಬೀಬಾ, ಹನುಮಂತ್ರಾಯ, ಜಲೀಲ್ ಸಾಬ, ಬಸ್ಸಪ್ಪ ಅಂಗಡಿ, ಶರಣಪ್ಪ, ಸಾವಿತ್ರಮ್ಮ, ರಮೇಶ ಪವಾರ, ಮಂಜುಳಾ, ಸುಜಾತ, ಆನಂದ, ಕೆ.ಎನ್ ಹುಣಸಿಕಟ್ಟಿ ಇತರರಿದ್ದರು.

Previous articleಮಾನ್ವಿ: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಶಾಸಕ ಹಂಪಯ್ಯ ನಾಯಕ ಸೂಚನೆ