ಮಾನ್ವಿ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಶಿಕ್ಷಣ ವಿರೋಧಿ ನೀತಿಗಳಿಂದಾಗಿ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಇದರ ಪರಿಣಾಮವಾಗಿ ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ. ಹಿಂದೂ ಧರ್ಮದ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ವಿರೋಧ ವ್ಯಕ್ತಪಡಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶ್ರೀರಾಮಸೇನೆಯಿಂದ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಂದಾಜು 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆ ಇರುವುದರಿಂದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದು ಕನ್ನಡ ಭಾಷೆ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಆರೋಪಿಸಿದರು.
ಕೆಲವು ಕ್ರೈಸ್ತ ಮಿಷನರಿ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿವೆ ಹಾಗೂ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಪ್ರಯತ್ನ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಚಟುವಟಿಕೆಗಳಿಗೆ ಕೆಲವು ಶಿಕ್ಷಣಾಧಿಕಾರಿಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರಾಜ್ಯಾದ್ಯಂತ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ದಸರಾ, ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳು ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಪ್ರಮುಖ ಭಾಗಗಳಾಗಿವೆ. ಮಕ್ಕಳು ತಮ್ಮ ಹಬ್ಬಗಳ ಮಹತ್ವ ತಿಳಿದು ಕುಟುಂಬದೊಂದಿಗೆ ಆಚರಿಸಲಿ ಎಂಬ ಉದ್ದೇಶದಿಂದ ದಸರಾ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಆದರೆ ಕೆಲವು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಧರ್ಮದ ಮಕ್ಕಳು ಅಭ್ಯಾಸ ಮಾಡುತ್ತಿದ್ದರೂ, ಹೂವು, ಕುಂಕುಮ, ಬಳೆ ಧರಿಸುವುದು ಸೇರಿದಂತೆ ಹಿಂದೂ ಸಂಪ್ರದಾಯಗಳಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ದಸರಾ ಸಂದರ್ಭದಲ್ಲಿ ಮಕ್ಕಳಿಗೆ ಹಬ್ಬದ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶವಾಗದಂತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದಸರಾ ಹಬ್ಬಕ್ಕೆ ರಜೆ ನೀಡದ ಕೆಲವು ಶಿಕ್ಷಣ ಸಂಸ್ಥೆಗಳು ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚಿನ ದಿನಗಳ ಕಾಲ ರಜೆ ನೀಡುತ್ತಿವೆ. ಇಂತಹ ಹಿಂದೂ ವಿರೋಧಿ ನೀತಿಗಳನ್ನು ಖಂಡಿಸಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮುಂದೆ ಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಯೊಬ್ಬ ಹಿಂದೂ ತಮ್ಮ ಹಬ್ಬಗಳು ಹಲಾಲ್ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಹಿಂದೂ ಸಂಪ್ರದಾಯಗಳನ್ನು ಗೌರವಿಸುವ ವ್ಯಾಪಾರಿಗಳೊಂದಿಗೆ ವ್ಯವಹಾರ ನಡೆಸಬೇಕು. ಹಿಂದೂಗಳ ಪವಿತ್ರ ಕ್ಷೇತ್ರಗಳು ಮತ್ತು ಧಾರ್ಮಿಕ ಕೇಂದ್ರಗಳ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ದೂರು ದಾಖಲಿಸಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಶ್ರೀರಾಮಸೇನೆ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವವನ್ನು ಗೌರವಿಸುತ್ತದೆ. ಯಾವುದೇ ಧರ್ಮಗ್ರಂಥವೂ ಅಸ್ಪೃಶ್ಯತೆ, ದೌರ್ಜನ್ಯ ಮತ್ತು ಶೋಷಣೆಯನ್ನು ಸಮರ್ಥಿಸುವುದಿಲ್ಲ. ಎಲ್ಲ ಧರ್ಮ ಹಾಗೂ ಸಮುದಾಯಗಳನ್ನು ಸಮಾನವಾಗಿ ಕಾಣುವ ಸಂಘಟನೆಯಾಗಿ, ದಲಿತರ ಮೇಲೆ ದೌರ್ಜನ್ಯ ನಡೆದರೆ ಶೋಷಿತರ ಪರವಾಗಿ ಹೋರಾಟ ನಡೆಸಲಾಗುವುದು. ಹಿಂದೂ ಸಮುದಾಯಗಳಲ್ಲಿ ಸೌಹಾರ್ದತೆ ಮತ್ತು ಸಮಾನತೆ ಬೆಳೆಸಲು ರಾಜ್ಯದ ಎಂಟು ಕಡೆಗಳ ದೇವಸ್ಥಾನಗಳಲ್ಲಿ ಸಾಮೂಹಿಕ ಭೋಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಶುದ್ಧೀಕರಣ ಪ್ರಕ್ರಿಯೆಯನ್ನು ನೆಪವಾಗಿಟ್ಟುಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಸಹಿಸದ ಕೆಲವರು ಈ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಹಕ್ಕನ್ನು ಮರಳಿ ಪಡೆಯಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಚಲನಚಿತ್ರ ನಟ ಪ್ರಕಾಶ್ ರಾಜ್ ಅವರ ನಟನೆಯನ್ನು ಮೆಚ್ಚುತ್ತೇವೆ. ಆದರೆ ಅವರು ತಮ್ಮ ನಟನೆಯನ್ನು ಸಿನಿಮಾಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಾವಿ, ಜಿಲ್ಲಾಧ್ಯಕ್ಷ ರಘುನಾಯಕ, ಪ್ರಮೋದ್ ಆಚಾರ್ಯ, ನಾಗರಾಜ ಶೆಟ್ಟಿ ಚೀಕಲಪರ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.








