ರಾಯಚೂರು: ಜಂತರ್ ಮಂತರ್ನ ನಿಗದಿತ ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ಹಿಂಪಡೆಯುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಜಂತರ್ ಮಂತರ್ ಸಾರ್ವಜನಿಕ ಪ್ರತಿಭಟನಾ ಸ್ಥಳವಾಗಿ ಮುಂದುವರಿಯಲಿದ್ದು, ಅದನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಪ್ರತಿರೋಧಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರಿ ಕ್ರಮವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಿನ್ನಮತದ ಬಗ್ಗೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಸಾಂವಿಧಾನಿಕ ಹಕ್ಕಿನ ಬಗೆಗಿನ ತಿರಸ್ಕಾರವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟೀಕಿಸಿದೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸರು ಈಗಾಗಲೇ ವಾಡಿಕೆಯಂತೆ ಅನುಮತಿ ನಿರಾಕರಿಸುತ್ತಿದ್ದಾರೆ. ಪೊಲೀಸರ ನಿರ್ಬಂಧಗಳ ಮೂಲಕ ಜಾರಿಯಲ್ಲಿದ್ದ ಕ್ರಮವನ್ನು ಇದೀಗ ಅಧಿಕೃತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ವ್ಯಕ್ತವಾಗುವ ಸಾರ್ವಜನಿಕ ಆಕ್ರೋಶವನ್ನು ಹತ್ತಿಕ್ಕುವ ಮತ್ತೊಂದು ಪ್ರಯತ್ನ ಇದಾಗಿದೆ ಎಂದು ಪಕ್ಷ ಆರೋಪಿಸಿದೆ.
ಪ್ರತಿಭಟನೆಗಾಗಿ ಪರ್ಯಾಯ ಸ್ಥಳಗಳೆಂದು ಸೂಚಿಸಿರುವ ರಾಮ್ಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳು ಜಂತರ್ ಮಂತರ್ಗೆ ಪರ್ಯಾಯವಾಗಲಾರವು ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ರಾಜಕೀಯ ಅಧಿಕಾರದ ಕೇಂದ್ರಗಳಿಂದ ಸಾರ್ವಜನಿಕ ಪ್ರತಿಭಟನೆಗಳನ್ನು ದೂರವಿಡುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ಟೀಕಿಸಿದೆ.
ಜಂತರ್ ಮಂತರ್ ಸಾರ್ವಜನಿಕರಿಗೆ ಸುಲಭವಾಗಿ ತಲುಪಲು ಸಾಧ್ಯವಾಗುವ ಹಾಗೂ ರಾಜಕೀಯ ಅಧಿಕಾರದ ಕೇಂದ್ರಗಳಿಗೆ ಸಮೀಪದಲ್ಲಿರುವುದರಿಂದ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯ ಪ್ರಮುಖ ವೇದಿಕೆಯಾಗಿದೆ. ಇಂತಹ ಸ್ಥಳದಿಂದ ಸಾರ್ವಜನಿಕರನ್ನು ದೂರವಿಡುವುದು ಭಿನ್ನಮತವನ್ನು ಅದೃಶ್ಯಗೊಳಿಸಿ, ರಾಜಕೀಯವಾಗಿ ನಿಷ್ಪ್ರಭಗೊಳಿಸುವ ಪ್ರಯತ್ನವಾಗಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಜಂತರ್ ಮಂತರ್ ಸಾರ್ವಜನಿಕ ಪ್ರತಿಭಟನಾ ಸ್ಥಳವಾಗಿ ಮುಂದುವರಿಯಬೇಕು. ಶಾಂತಿಯುತ ಪ್ರತಿಭಟನೆ ಮತ್ತು ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯ ಹಕ್ಕನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವನ್ನು ಪ್ರತಿರೋಧಿಸಲಾಗುವುದು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ತಿಳಿಸಿದೆ ಎಂದು ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ








