ರಾಯಚೂರು: ಎಲ್ ನಿನೋ ಹವಾಮಾನ ಪರಿಣಾಮದಿಂದ ಮಳೆಯ ಕೊರತೆ ಉಂಟಾಗಿ ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 23ರಿಂದ ನಗರದ ಎಲ್ಲಾ ವಾರ್ಡ್ಗಳಿಗೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಪ್ರಸ್ತುತ ನಗರದಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಗಣೇಕಲ್ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ನಗರದ ಅಗತ್ಯಕ್ಕೆ ಸಾಕಾಗುತ್ತಿಲ್ಲ. ಇದರಿಂದಾಗಿ ರಾಂಪುರ ಜಲಶುದ್ಧೀಕರಣ ಘಟಕಕ್ಕೆ ಅಗತ್ಯ ಪ್ರಮಾಣದಲ್ಲಿ ಕಚ್ಚಾ ನೀರು ಲಭ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಸರಬರಾಜನ್ನು ಮುಂದುವರಿಸುವ ಉದ್ದೇಶದಿಂದ ಕೃಷ್ಣಾ ನದಿಯಿಂದ ಲಭ್ಯವಾಗುವ ನೀರನ್ನು ಬಳಸಿಕೊಂಡು ನಗರಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ನವೆಂಬರ್ 23ರ ಸೋಮವಾರದಿಂದ ಪ್ರತಿ ನಾಲ್ಕನೇ ದಿನ ನೀರು ಪೂರೈಕೆ ಮಾಡುವ ಪರಿಷ್ಕೃತ ವ್ಯವಸ್ಥೆ ಜಾರಿಗೆ ಬರಲಿದ್ದು, ಮುಂದಿನ ಅಧಿಕೃತ ಸೂಚನೆ ಹೊರಡಿಸುವವರೆಗೆ ಇದು ಮುಂದುವರಿಯಲಿದೆ ಎಂದು ರಾಯಚೂರು ಮಹಾನಗರ ಪಾಲಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೀರು ಮಿತ ಬಳಕೆಗೆ ಮನವಿ
ನೀರಿನ ಕೊರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಕುಡಿಯುವ ನೀರನ್ನು ಅತ್ಯಂತ ಮಿತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸುವಂತೆ ಪಾಲಿಕೆ ಮನವಿ ಮಾಡಿದೆ. ಮುಂದಿನ ನಾಲ್ಕು ದಿನಗಳಿಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಸ್ವಚ್ಛವಾದ ಪಾತ್ರೆಗಳಲ್ಲಿ ಸಂಗ್ರಹಿಸಿಕೊಳ್ಳಬೇಕು. ವಾಹನ ತೊಳೆಯುವುದು, ಆವರಣ ಸ್ವಚ್ಛಗೊಳಿಸುವುದು ಸೇರಿದಂತೆ ಅನಾವಶ್ಯಕ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು. ಮನೆಗಳ ನಲ್ಲಿಗಳು ಮತ್ತು ಪೈಪ್ಲೈನ್ಗಳಲ್ಲಿ ನೀರು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ಸಂಗ್ರಹಿಸಿದ ನೀರನ್ನು ಮುಚ್ಚಳವಿರುವ ಸ್ವಚ್ಛ ಪಾತ್ರೆಗಳಲ್ಲಿ ಸುರಕ್ಷಿತವಾಗಿ ಇಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕನಿಷ್ಠ ಒಂದು ನಿಮಿಷ ಕುದಿಸಿ, ತಣ್ಣಗಾದ ಬಳಿಕ ಬಳಸಬೇಕು. ನೀರಿನ ಲಭ್ಯತೆಗೆ ಅನುಗುಣವಾಗಿ ಸರಬರಾಜು ಸಮಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಕೋರಿದೆ.
ನಗರದ ಎಲ್ಲ ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಸಲು ಪ್ರತಿಯೊಂದು ಹನಿ ನೀರನ್ನು ಉಳಿಸುವ ಮೂಲಕ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ.








