ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿಸಲು ಸಾಧ್ಯವಿದೆ. ಆದರೆ, ರೈತರ ಸಂಕಷ್ಟದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮೌನವಾಗಿರುವುದು ಖಂಡನೀಯ ಎಂದು ರೈತ ಸಂಘದ ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷ ಮುಜಾಹಿದ್ ಮರ್ಚೆಡ್ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಕೃಷ್ಣಭಾಗ್ಯ ಜಲ ನಿಗಮದ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ವತಿಯಿಂದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ್ ಮದ್ದರಕಿ ನೇತೃತ್ವದಲ್ಲಿ ನವೆಂಬರ್ 11ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯುತ್ತಿದೆ. ನವೆಂಬರ್ 16ರಂದು ನಡೆದ ಬೃಹತ್ ರ‍್ಯಾಲಿ ಹಾಗೂ 9ನೇ ದಿನದ ಸತ್ಯಾಗ್ರಹದಲ್ಲಿ ಮೂರನೇ ಬಾರಿಗೆ ಭಾಗವಹಿಸಿ ಅವರು ಮಾತನಾಡಿದರು.

ರೈತರು ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಪ್ರತಿ ಎಕರೆಗೆ ಸುಮಾರು 1 ಲಕ್ಷದಿಂದ 1.5 ಲಕ್ಷ ರೂ.ವರೆಗೆ ಬಂಡವಾಳ ಹೂಡಿದ್ದಾರೆ. ಆದರೆ, ಸಮರ್ಪಕವಾಗಿ ನೀರು ದೊರೆಯದ ಕಾರಣ ಬೆಳೆಗಳು ಒಣಗುವ ಹಂತ ತಲುಪಿವೆ. ಸಾಲ ಮಾಡಿ ಕೃಷಿ ಮಾಡಿರುವ ರೈತರಿಗೆ ಬೆಳೆ ಕೈಗೆ ಬಾರದಿದ್ದರೆ ಬದುಕು ಬೀದಿಗೆ ಬೀಳಲಿದೆ. ಆದರೂ ಸರ್ಕಾರಗಳು ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ. ಉತ್ತರ ಕರ್ನಾಟಕದ ಜನರ ಹಾಗೂ ರೈತರ ಧ್ವನಿ ವಿಧಾನಸೌಧವನ್ನು ತಲುಪುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೃಷ್ಣಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ನೀರಿನ ಮೇಲೆ ಸುಮಾರು ಏಳು ಶಾಸಕರ ಕ್ಷೇತ್ರಗಳ ರೈತರ ಕೃಷಿ ಅವಲಂಬಿತವಾಗಿದೆ. ಈ ಭಾಗದ ಶಾಸಕರು ರೈತರ ಸಮಸ್ಯೆಗಳಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ಮೌನ ವಹಿಸಿದ್ದಾರೆ. ಏಳು ಶಾಸಕರು ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ನೀರು ಬಿಡುಗಡೆ ಮಾಡಿಸುವುದು ಕಷ್ಟವೇನಲ್ಲ. ಚುನಾವಣೆ ಬಂದಾಗ ರೈತರ ಮತ ಬೇಕು, ಆದರೆ ರೈತರ ಸಂಕಷ್ಟ ಎದುರಾದಾಗ ಶಾಸಕರು ಕಾಣೆಯಾಗುತ್ತಾರೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ನಿಜವಾದ ಕಾಳಜಿ ಹೊಂದಿರುವವರನ್ನೇ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ವಿಶೇಷವಾಗಿ ದೇವದುರ್ಗ ಕ್ಷೇತ್ರದ ಶಾಸಕಿ ಜಿ. ಕರೆಮ್ಮ ನಾಯಕ ಅವರು ವಿಧಾನಸೌಧದ ಗಾಂಧೀಜಿ ಪ್ರತಿಮೆ ಮುಂದೆ ಸತ್ಯಾಗ್ರಹ ಮಾಡುವುದಾಗಿ ಹೇಳಿ ಹಲವು ದಿನಗಳು ಕಳೆದಿವೆ. ಆದರೆ, ಈವರೆಗೂ ಸತ್ಯಾಗ್ರಹ ಆರಂಭಿಸಿಲ್ಲ. ರೈತರ ಬೆಳೆಗಳು ಸಂಪೂರ್ಣ ಒಣಗಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದ ನಂತರ ಸತ್ಯಾಗ್ರಹ ಮಾಡುತ್ತೀರಾ? ರೈತರ ನೋವು ಮತ್ತು ಸಂಕಷ್ಟ ನಿಮಗೆ ಯಾವಾಗ ಅರ್ಥವಾಗುತ್ತದೆ? ಎಂದು ಮುಜಾಹಿದ್ ಮರ್ಚೆಡ್ ಪ್ರಶ್ನಿಸಿದರು.

ಕೂಡಲೇ ಕೃಷ್ಣಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಬೆಳೆಗಳಿಗೆ ಉಂಟಾಗುವ ನಷ್ಟ ಹಾಗೂ ರೈತರಿಗೆ ಸಂಭವಿಸಬಹುದಾದ ಯಾವುದೇ ಅನಾಹುತಗಳಿಗೆ ಸಂಬಂಧಪಟ್ಟ ಶಾಸಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ರೈತರ ಬದುಕು ಮತ್ತು ಬೆಳೆಗಳನ್ನು ಉಳಿಸಲು ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಮುಜಾಹಿದ್ ಮರ್ಚೆಡ್ ಆಗ್ರಹಿಸಿದರು.


Previous articleನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್
Next articleಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರಿಗೂ ಸಮರ್ಪಕವಾಗಿ ನೀರು ಹರಿಸಿ: ಚಾಮರಸ ಮಾಲಿಪಾಟೀಲ್