ರಾಯಚೂರು: ಜನಜಾತಿ ಸಮಾಜದ ಇತಿಹಾಸ, ಅಸ್ಮಿತೆ, ಸಂಸ್ಕೃತಿ ಮತ್ತು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ನವೆಂಬರ್ 15ರಂದು ದೇಶಾದ್ಯಂತ ಜನಜಾತೀಯ ಗೌರವ ದಿವಸ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೂಪಾ ನಾಯಕ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ನಾಗರಿಕತೆ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಜನಜಾತಿ ಸಮಾಜದ ಕೊಡುಗೆ ಅಪಾರವಾಗಿದೆ. ಶತಮಾನಗಳಿಂದಲೂ ತಮ್ಮ ಸಂಪ್ರದಾಯ, ಪ್ರಕೃತಿಯೊಂದಿಗಿನ ಸಹಬಾಳ್ವೆ, ಸಾಮಾಜಿಕ ಮೌಲ್ಯಗಳು ಹಾಗೂ ಧೈರ್ಯದಿಂದ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ದೇಶದ ಸ್ವಾತಂತ್ರ್ಯ ಮತ್ತು ಅಸ್ಮಿತೆಯ ರಕ್ಷಣೆಗಾಗಿ ಜನಜಾತಿ ಸಮುದಾಯದ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ಜನಜಾತಿ ಸಮಾಜದ ಮಹಾನ್ ಹೋರಾಟಗಾರರ ಇತಿಹಾಸಕ್ಕೆ ರಾಷ್ಟ್ರೀಯ ಮಾನ್ಯತೆ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 2021ರಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ನ್ನು ಜನಜಾತೀಯ ಗೌರವ ದಿವಸವನ್ನಾಗಿ ಘೋಷಿಸಿದ್ದಾರೆ. ಇದು ಕೇವಲ ಆಚರಣೆಯ ದಿನವಲ್ಲ, ಜನಜಾತಿ ಸಮಾಜದ ಹೋರಾಟ, ತ್ಯಾಗ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಗೌರವಿಸುವ ದಿನವಾಗಿದೆ ಎಂದು ತಿಳಿಸಿದರು.
ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಉಲ್ಲುಲಾನ್ ಚಳವಳಿ ನಡೆಸಿ ಜನಜಾತಿ ಸಮಾಜದ ಹಕ್ಕುಗಳಿಗಾಗಿ ಹೋರಾಡಿದರು. ರಾಣಿ ದುರ್ಗಾವತಿ, ತಾಂತ್ಯಾ ಮಾಮಾ ಭೀಲ್, ಸಿಧು-ಕಾನು, ತಿಲ್ಲಾ ಮಾಂಝಿ, ನೀಲಾಂಬರ್-ಪೀತಾಂಬರ್ ಸೇರಿದಂತೆ ಅನೇಕ ಜನಜಾತಿ ಹೋರಾಟಗಾರರ ತ್ಯಾಗವನ್ನು ದೇಶ ಸ್ಮರಿಸಬೇಕಿದೆ. ಜಲ, ಅರಣ್ಯ ಮತ್ತು ಭೂಮಿಯ ಹಕ್ಕುಗಳ ರಕ್ಷಣೆಯಲ್ಲಿ ಜನಜಾತಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜನಜಾತಿ ಸಮಾಜಕ್ಕೆ ಹೆಚ್ಚಿನ ಗೌರವ, ಪ್ರಾತಿನಿಧ್ಯ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಭಾರತದ ಮೊದಲ ಜನಜಾತಿ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಜನಜಾತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳು, ದುರ್ಬಲ ಜನಜಾತಿ ಗುಂಪುಗಳ ಅಭಿವೃದ್ಧಿಗೆ ಪಿಎಂ-ಜನ್ಮನ್ ಹಾಗೂ ಜನಜಾತಿ ಬಹುಸಂಖ್ಯಾತ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಧರ್ತಿ ಆಬಾ ಜನಜಾತಿ ಗ್ರಾಮ ಉತ್ಕರ್ಷ ಅಭಿಯಾನದಂತಹ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಜನಜಾತಿ ಸಮಾಜದ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ. 2047ರ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಜನಜಾತಿ ಸಮಾಜದ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 15ರಂದು ಜನಜಾತೀಯ ಗೌರವ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ ಹಾಗೂ ವೀರೇಶ ಉಪಸ್ಥಿತರಿದ್ದರು.








