ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಸೋಲು ಎದುರಾದರೂ ಎದೆಗುಂದದೆ ಮತ್ತೆ ಮತ್ತೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಒಂದೇ ಪರೀಕ್ಷೆಗೆ ಸೀಮಿತವಾಗದೆ ಲಭ್ಯವಿರುವ ಎಲ್ಲ ಉದ್ಯೋಗಾವಕಾಶಗಳನ್ನು ಬಳಸಿಕೊಂಡು ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ.ಎಸ್ ಕರೆ ನೀಡಿದರು.

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯ ಕಲ್ಪಿಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಷ್ಟೇ ಅಲ್ಲ. ಇಲ್ಲಿನ ಯುವಕರು ಉನ್ನತ ಶಿಕ್ಷಣ ಪಡೆದು ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಯುವಕರೇ ವಿವಿಧ ಹುದ್ದೆಗಳನ್ನು ಅಲಂಕರಿಸಿದಾಗ ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಈ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಮಾರ್ಗದರ್ಶನಕ್ಕಿಂತ ವೈಯಕ್ತಿಕ ಪರಿಶ್ರಮವೇ ನಿರ್ಣಾಯಕ. ತರಬೇತಿ ಸಂಸ್ಥೆಗಳು ಯಾವ ವಿಷಯಗಳನ್ನು ಓದಬೇಕು ಎಂಬುದನ್ನು ತಿಳಿಸಬಹುದು. ಆದರೆ ಓದುವ ಮತ್ತು ಗುರಿ ಮುಟ್ಟುವ ಜವಾಬ್ದಾರಿ ಅಭ್ಯರ್ಥಿಗಳ ಮೇಲಿದೆ. ಹೊರಗಿನವರ ಪ್ರೋತ್ಸಾಹಕ್ಕಿಂತ ನಮ್ಮೊಳಗಿನ ಆತ್ಮವಿಶ್ವಾಸ ಮತ್ತು ಸಾಧಿಸುವ ಹಠ ಮುಖ್ಯ ಎಂದು ಹೇಳಿದರು.

ತಾವು ಐಎಎಸ್ ಅಧಿಕಾರಿಯಾಗುವ ಪ್ರಯಾಣದಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸಿದ ಅವರು, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ವಿಫಲವಾಗಿದ್ದೆ. ಆರಂಭದಲ್ಲಿ ಅನುಭವಿಗಳೊಂದಿಗೆ ಸ್ಪರ್ಧಿಸುವಾಗ ಆತ್ಮವಿಶ್ವಾಸ ಕುಗ್ಗಿದ ಸಂದರ್ಭಗಳೂ ಇದ್ದವು. ಉದ್ಯೋಗ ತೊರೆದು ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರಿಂದ ಸರಿಯಾದ ನಿರ್ಧಾರ ಕೈಗೊಂಡಿದ್ದೇನೆಯೇ ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಆದರೂ ಗುರಿಯ ಮೇಲಿನ ನಂಬಿಕೆಯಿಂದ ಪ್ರಯತ್ನ ಮುಂದುವರಿಸಿದೆ. ಕುಟುಂಬದಿಂದ ಮದುವೆಯ ಒತ್ತಡ ಎದುರಾದಾಗಲೂ ಓದನ್ನು ನಿಲ್ಲಿಸದೆ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದೊರೆತ ನಂತರವೂ ಐಎಎಸ್ ಕನಸನ್ನು ನನಸಾಗಿಸಿಕೊಳ್ಳುವ ಛಲದಿಂದ ಮತ್ತೊಮ್ಮೆ ಸಿದ್ಧತೆ ನಡೆಸಿ ಯಶಸ್ವಿಯಾದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಉನ್ನತ ಹುದ್ದೆಗಳಿಗೆ ಹೋಗುವುದನ್ನು ವಿರೋಧಿಸಿದ್ದ ಸಮಾಜದಲ್ಲೇ ಇಂದು ತಮ್ಮ ಮಕ್ಕಳನ್ನು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧಪಡಿಸಲು ಮಾರ್ಗದರ್ಶನ ಕೇಳುವ ಬದಲಾವಣೆ ಕಂಡುಬರುತ್ತಿದೆ. ಇದೇ ರೀತಿಯ ಬದಲಾವಣೆ ರಾಯಚೂರು ಜಿಲ್ಲೆಯಲ್ಲಿಯೂ ಆಗಬೇಕು. ಇಲ್ಲಿ ಒಬ್ಬ ಯುವಕ ಅಥವಾ ಯುವತಿ ಯಶಸ್ಸು ಸಾಧಿಸಿದರೆ, ಅವರನ್ನು ಮಾದರಿಯಾಗಿಟ್ಟುಕೊಂಡು ಅವರ ಊರಿನ ಕನಿಷ್ಠ ಹತ್ತು ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಜ್ಜೆ ಇಡುವಂತಾಗಬೇಕು. ಅಭ್ಯರ್ಥಿಗಳು ತಮ್ಮ ಸಾಧನೆಯ ಮೂಲಕ ಇತರರಿಗೆ ದಾರಿದೀಪವಾಗಬೇಕು ಎಂದು ಆಶಿಸಿದರು.

ಪ್ರಸ್ತುತ ಕೆಪಿಎಸ್‌ಸಿ, ಯುಪಿಎಸ್‌ಸಿ ಮಾತ್ರವಲ್ಲದೆ ಬ್ಯಾಂಕಿಂಗ್, ನಬಾರ್ಡ್ ಹಾಗೂ ಸಿಬ್ಬಂದಿ ಆಯ್ಕೆ ಆಯೋಗದ ಮೂಲಕವೂ ಹಲವು ನೇಮಕಾತಿಗಳು ನಡೆಯುತ್ತಿವೆ. ಹೀಗಾಗಿ ಒಂದೇ ಪರೀಕ್ಷೆಯನ್ನು ಗುರಿಯಾಗಿಸಿಕೊಂಡು ಉಳಿದ ಅವಕಾಶಗಳನ್ನು ಕೈಬಿಡಬಾರದು. ಸಾಧ್ಯವಾದಷ್ಟು ಎಲ್ಲ ಪರೀಕ್ಷೆಗಳನ್ನು ಎದುರಿಸಬೇಕು. ನಿರಂತರವಾಗಿ ಪರೀಕ್ಷೆ ಬರೆಯುವುದರಿಂದ ಪರೀಕ್ಷಾ ಕೊಠಡಿಯ ಆತಂಕ ದೂರವಾಗುವುದರ ಜತೆಗೆ ಸಮಯ ನಿರ್ವಹಣೆ ಮತ್ತು ಉತ್ತರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ. ಯಾವ ವಿಷಯದಲ್ಲಿ ಹಿಡಿತವಿದೆ, ಎಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತದೆ. ಸಿದ್ಧತೆಗೆ ಗರಿಷ್ಠ ಎರಡು ವರ್ಷಗಳ ಕಾಲ ಗಂಭೀರವಾಗಿ ಶ್ರಮಿಸಿ, ನಂತರವೂ ಪ್ರಚಲಿತ ವಿದ್ಯಮಾನಗಳ ಅಧ್ಯಯನದ ಮೂಲಕ ಜ್ಞಾನವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಯನದ ಅವಧಿ ಮತ್ತು ವಿಧಾನ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ತಮ್ಮ ಸಿದ್ಧತೆಯ ಸಂದರ್ಭದಲ್ಲಿ ಪ್ರತಿದಿನ 12ರಿಂದ 13 ಗಂಟೆಗಳ ಕಾಲ ಓದುತ್ತಿದ್ದೆ. ಆದರೆ ಎಲ್ಲರೂ ಅದೇ ಕ್ರಮ ಅನುಸರಿಸಬೇಕೆಂದಿಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓದಿನ ವೇಳಾಪಟ್ಟಿ ರೂಪಿಸಿಕೊಂಡು ಯಾವುದೇ ಕಾರಣಕ್ಕೂ ಅಧ್ಯಯನದಲ್ಲಿ ನಿರಂತರತೆ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಕನಸು ಕಾಣುವುದಷ್ಟೇ ಮುಖ್ಯವಲ್ಲ, ಅದನ್ನು ನನಸಾಗಿಸುವವರೆಗೂ ನಿದ್ರೆಗೆ ಜಾರದೆ ಪರಿಶ್ರಮಿಸುವ ಸಂಕಲ್ಪ ಇರಬೇಕು ಎಂಬ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಶಯವನ್ನು ಸ್ಮರಿಸಿದರು.

ಪ್ರತಿಯೊಬ್ಬರ ಯಶಸ್ಸಿನ ಹಾದಿ ವಿಭಿನ್ನವಾಗಿದ್ದು, ಉದ್ಯೋಗದಲ್ಲಿರುವವರು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಾಧ್ಯವಿದೆ. ತಾವು ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದೆ. ಸಂಚಾರ ದಟ್ಟಣೆಯಲ್ಲಿ ಕಳೆಯುತ್ತಿದ್ದ ಸಮಯವನ್ನೂ ಮೊಬೈಲ್ ಮೂಲಕ ಅಧ್ಯಯನಕ್ಕೆ ಬಳಸಿಕೊಳ್ಳುತ್ತಿದ್ದೆ. ಸಿದ್ಧತೆ ಆರಂಭಿಸಿದ ಬಳಿಕ ವಾರಾಂತ್ಯದ ಮನರಂಜನೆ, ಸ್ನೇಹಿತರೊಂದಿಗಿನ ಸುತ್ತಾಟ ಸೇರಿದಂತೆ ಹಲವು ವೈಯಕ್ತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೆ. ಗುರಿ ಸಾಧಿಸಬೇಕೆಂಬ ನಿರ್ಧಾರ ಮಾಡಿದಾಗ ಆದ್ಯತೆಗಳನ್ನೂ ಬದಲಿಸಿಕೊಳ್ಳಬೇಕಾಗುತ್ತದೆ ಎಂದರು.

ಕುಟುಂಬದ ಆರ್ಥಿಕ ಜವಾಬ್ದಾರಿ ಹೊತ್ತಿರುವವರು ಉದ್ಯೋಗವನ್ನು ತೊರೆಯದೆ ಅದರೊಂದಿಗೆ ಓದನ್ನು ಮುಂದುವರಿಸಬಹುದು. ತಮ್ಮ ಕಚೇರಿಯಲ್ಲಿಯೂ ಉದ್ಯೋಗದ ಜವಾಬ್ದಾರಿಯ ಜತೆಗೆ ಯುಪಿಎಸ್‌ಸಿ ಸಿದ್ಧತೆ ನಡೆಸುತ್ತಿರುವವರಿದ್ದಾರೆ. ದಿನದ ಕೆಲವು ಗಂಟೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೂ ಗುರಿಯತ್ತ ಸಾಗಬಹುದು. ಆದರೆ ಸರ್ಕಾರಿ ಹುದ್ದೆಗಳಿಗೆ ತೀವ್ರ ಪೈಪೋಟಿ ಇರುವುದರಿಂದ ಮನರಂಜನೆ, ಪ್ರವಾಸ ಹಾಗೂ ಸ್ನೇಹಿತರೊಂದಿಗೆ ಕಳೆಯುವ ಸಮಯದಲ್ಲಿ ಕೆಲವು ರಾಜಿ ಮಾಡಿಕೊಳ್ಳುವುದು ಅನಿವಾರ್ಯ. ಇಂತಹ ಸವಾಲುಗಳನ್ನು ಎದುರಿಸುವ ಮಾನಸಿಕ ಸಿದ್ಧತೆ ಅಭ್ಯರ್ಥಿಗಳಲ್ಲಿರಬೇಕು ಎಂದು ಹೇಳಿದರು.

ಜಿಲ್ಲಾಡಳಿತದಿಂದ ಅಭ್ಯರ್ಥಿಗಳಿಗೆ ಅಧಿಕಾರಿಗಳ ಮಾರ್ಗದರ್ಶನ ಹಾಗೂ ತರಬೇತಿ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಇದನ್ನು ಕೇವಲ ತರಬೇತಿ ಕಾರ್ಯಕ್ರಮವೆಂದು ಪರಿಗಣಿಸದೆ ಭವಿಷ್ಯದ ಸಾಧನೆಗೆ ಸಿಕ್ಕಿರುವ ವೇದಿಕೆಯಾಗಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯ ಯುವಕರೇ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಜಿಲ್ಲೆಯ ಹೆಗ್ಗಳಿಕೆಗೆ ಪಾತ್ರರಾಗಬೇಕು. ಇತರ ಜಿಲ್ಲೆಗಳಿಗೂ ರಾಯಚೂರು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ವರ್ಮಾ, ಸಂಪನ್ಮೂಲ ವ್ಯಕ್ತಿ ನಂಜಣ್ಣ ನಾಯಕ, ಗ್ರಂಥಾಲಯ ಅಧಿಕಾರಿಗಳಾದ ಸಿದ್ದಾರ್ಥ, ನಿರ್ಮಲಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಶಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Previous articleದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ದಲಿತ ಮುಖಂಡರ ನಿರ್ಧಾರ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
Next articleತಾಲೂಕು ಆಡಳಿತದಿಂದ ಕಾಲುವೆ ನೀರು ಹಂಚಿಕೆ ಕುರಿತು ರೈತರ ಸಭೆ