​ಸಿರವಾರ: ಸಿಂಧನೂರ ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಮುಖಂಡರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

​ಅಕ್ಟೋಬರ್ 18 ರಂದು ನಡೆದ ಮಾರುತೇಶ್ವರ ಜಾತ್ರಾ ಮಹೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ದಲಿತ ಯುವಕರನ್ನು ಸವರ್ಣೀಯರು ತಡೆದಿದ್ದಾರೆ. ಇದನ್ನು ಪ್ರಶ್ನಿಸಿದ ಹುಸೇನಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದ್ದು, ತದನಂತರ ದಲಿತ ಕೇರಿಗೆ ನುಗ್ಗಿ ಮಹಿಳೆಯರು, ವೃದ್ಧರು, ಉಪನ್ಯಾಸಕ ತಾಯಪ್ಪ ಹಾಗೂ ವಿದ್ಯಾರ್ಥಿಗಳ ಮೇಲೆಯೂ ಅಮಾನವೀಯ ದೌರ್ಜನ್ಯ ಎಸಗಲಾಗಿದೆ ಎಂದು ಮುಖಂಡರು ಆರೋಪಿಸಿದರು.

​ಘಟನೆ ನಡೆದು ಎರಡು ವಾರಗಳು ಕಳೆದರೂ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಭೇಟಿ ನೀಡದಿರುವುದು ಮತ್ತು ಮುಖ್ಯ ಆರೋಪಿಗಳನ್ನು ಬಂಧಿಸದಿರುವುದರಿಂದ ಭಯಗೊಂಡ ದಲಿತರು ಗ್ರಾಮ ತೊರೆದಿದ್ದಾರೆ. ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಪ್ರಮುಖ ಆಗ್ರಹಗಳು:
​ತಿಡಿಗೋಳ ಘಟನೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ, SC/ST ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
​ದಲಿತರಿಗೆ ಸೂಕ್ತ ರಕ್ಷಣೆ ನೀಡಿ, ಗ್ರಾಮದಲ್ಲಿರುವ ಸಾಮಾಜಿಕ ಬಹಿಷ್ಕಾರವನ್ನು ತೆರವುಗೊಳಿಸಬೇಕು.
​ಗ್ರಾಮದಲ್ಲಿ ನಡೆದಿರುವ ಸರ್ಕಾರಿ ಭೂಮಿ ಕಬಳಿಕೆಯ ಕುರಿತು ಸೂಕ್ತ ತನಿಖೆ ನಡೆಸಬೇಕು.
​ಈ ಅನ್ಯಾಯವನ್ನು ಖಂಡಿಸಿ ನವೆಂಬರ್ 11ರ ಭಾನುವಾರ ಸಿಂಧನೂರಿನ ಪಿ ಡಬ್ಲೂ ಡಿ ಕ್ಯಾಂಪ್‌ನ ಅಂಬೇಡ್ಕರ್ ಸರ್ಕಲ್‌ನಿಂದ ತಿಡಿಗೋಳ ಗ್ರಾಮದವರೆಗೆ ಬೃಹತ್ ಬೈಕ್ ರ್‍ಯಾಲಿ ಹಾಗೂ ಬೆಳಿಗ್ಗೆ 11 ಗಂಟೆಗೆ ತಿಡಿಗೋಳದಲ್ಲಿ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ.

​ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡ ಬಸವರಾಜ ಭಂಡಾರಿ, ಬಡ್ಡ ಹನುಮಂತ, ವಿಜಯ ರಾಣಿ, ಅರಳಪ್ಪ ಯದ್ದಲದಿನ್ನಿ , ಸವಾರೆಪ್ಪ, ಸಾಮೆಲಪ್ಪ ನ್ಯಾಯಬೆಲೆ ಅಂಗಡಿ, ಮಲ್ಲಪ್ಪ, ಜಯಪ್ಪ, ಗ್ಯಾನಪ್ಪ, ಮಲ್ಲಪ್ಪ ನಾರಬಂಡಾ, ಎಂ. ಮನೋಹರ, ದಾನಪ್ಪ, ರಾಮಣ್ಣ ಮೇಸ್ತ್ರಿ, ಮೇಷಾಕ್ ಕೆಂಪು, ಯೇಸುಮಿತ್ರ, ಕರಿಯಪ್ಪ, ಮೌನೇಶ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Previous articleಹೊಲ ಉಳಿಸಿ, ರೈತರ ಆದಾಯ ಹೆಚ್ಚಿಸಿ: ಮಲ್ಲಟದಲ್ಲಿ ಜಾಗೃತಿ ಕಾರ್ಯಕ್ರಮ
Next articleಯುವಕರು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿಯಾಗಬೇಕು: ಡಿಸಿ ಪೂವಿತಾ.ಎಸ್