ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು 3,297 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.

ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ನಡೆದ ಮತ ಎಣಿಕೆಯಲ್ಲಿ ಶಶೀಲ್ ಜಿ. ನಮೋಶಿ ಅವರು 15,596 ಮತಗಳನ್ನು ಪಡೆದರು. ಚುನಾವಣೆಯಲ್ಲಿ ಒಟ್ಟು 34,784 ಮತದಾರರ ಪೈಕಿ 30,253 ಮತಗಳು ಚಲಾವಣೆಯಾಗಿದ್ದವು. ಮೂರು ಸುತ್ತುಗಳಲ್ಲಿ ನಡೆದ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲೂ ನಮೋಶಿ ಮುನ್ನಡೆ ಕಾಯ್ದುಕೊಂಡಿದ್ದರು.

ಇದನ್ನೂ ಓದಿ: ಶಶೀಲ್ ಜಿ. ನಮೋಶಿ ಗೆಲುವು: ಮಾನ್ವಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಚಲಾವಣೆಯಾದ ಮತಗಳಲ್ಲಿ 28,380 ಮತಗಳು ಸಿಂಧುವಾಗಿದ್ದು, 1,873 ಮತಗಳು ತಿರಸ್ಕೃತಗೊಂಡಿದ್ದವು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಶೇ.50ರಷ್ಟು ಮತಗಳ ಜೊತೆಗೆ ಒಂದು ಮತವನ್ನು ಸೇರಿಸಿ 14,191 ಮತಗಳನ್ನು ಗೆಲುವಿನ ಕೋಟಾ ಎಂದು ನಿಗದಿಪಡಿಸಲಾಗಿತ್ತು. ನಮೋಶಿ ಅವರು 15,596 ಮತಗಳನ್ನು ಪಡೆಯುವ ಮೂಲಕ ನಿಗದಿತ ಕೋಟಾವನ್ನು ಮೀರಿದರು. ಹೀಗಾಗಿ ಚುನಾವಣಾಧಿಕಾರಿ ಜಹೀರಾ ನಸೀಮ್ ಅವರು ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರ ವಿತರಿಸಿದರು.

ಅಭ್ಯರ್ಥಿಗಳು ಪಡೆದ ಮತಗಳ ವಿವರ

ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ 15,596 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು 12,299 ಮತಗಳನ್ನು ಪಡೆದರು. ಆಮ್ ಆದ್ಮಿ ಪಕ್ಷದ ಸಾಯಬಣ್ಣ ಜಮಾದಾರ 40 ಮತಗಳು ಹಾಗೂ ಜನತಾ ದಳ (ಸಂಯುಕ್ತ) ಪಕ್ಷದ ಶಂಕರೆಡ್ಡಿ ಪಾಟೀಲ 44 ಮತಗಳನ್ನು ಪಡೆದರು.

ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ನಾಗಣ್ಣ ಮೋತಕಪಲ್ಲಿ 49, ಟಿ.ಕೆ. ದಾಸರ 6, ಮಹಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ 10, ರಾಜಕುಮಾರ ಕೆ. ಕಲಬುರಗಿ 167, ರಾಜು ದೇವಪ್ಪ ಸೊನ್ನ 127, ಶರಣು ಪಿ. ಸುಗೂರು 13, ಶಶಿಧರ ಬಸವರಾಜ 4, ಶಿವಶಂಕರ ಅಣ್ಣಪ್ಪ ತರನಳ್ಳಿ 12 ಹಾಗೂ ಡಾ. ಸುರೇಶ ದಾವೀದಪ್ಪ 13 ಮತಗಳನ್ನು ಪಡೆದರು.

ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದವರಿಗೆ ಧನ್ಯವಾದ

ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಹಕರಿಸಿದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರರು, ಮತದಾನ ಮತ್ತು ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಮತ್ತು ಮತದಾರರಿಗೆ ಚುನಾವಣಾಧಿಕಾರಿ ಜಹೀರಾ ನಸೀಮ್ ಧನ್ಯವಾದ ತಿಳಿಸಿದರು.

ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರ ಸಮಕ್ಷಮ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿ ಸುಸೂತ್ರವಾಗಿ ನಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್., ಬಳ್ಳಾರಿ ಜಿಲ್ಲಾಧಿಕಾರಿ ಡಾ. ಕೆ. ನಾಗೇಂದ್ರ ಪ್ರಸಾದ್, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಹಾಗೂ ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರು ಸೇರಿದಂತೆ ಹಲವು ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.


Previous articleಶಶೀಲ್ ಜಿ. ನಮೋಶಿ ಗೆಲುವು: ಮಾನ್ವಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
Next articleರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ: ರಾಯಚೂರಿನಲ್ಲಿ ಶಿವಸೇನಾ ಕರ್ನಾಟಕದಿಂದ ಮಾನವ ಸರಪಳಿ, ಧರಣಿ