ರಾಯಚೂರು: ಉದ್ರಿ ಕೊಡಲಿಲ್ಲ ಎಂಬ ಕಾರಣಕ್ಕೆ ಕಿರಾಣಿ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಎಲ್.ಬಿ.ಎಸ್. ನಗರ ಬಡಾವಣೆಯ ಕ್ರೌನ್ ಬೇಕರಿ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ. ನರಸಿಂಹ (40) ಕೊಲೆಯಾದ ವ್ಯಕ್ತಿಯಾಗಿದ್ದು, ಕೃತ್ಯ ಎಸಗಿದ ಯುವಕರ ಪತ್ತೆಗೆ ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.(ರಾಯಚೂರು ಕೊಲೆ ಪ್ರಕರಣ)


ಎಲ್.ಬಿ.ಎಸ್. ನಗರ ಬಡಾವಣೆಯಲ್ಲಿರುವ ಕಿರಾಣಿ ಅಂಗಡಿಗೆ ಬಂದಿದ್ದ ಯುವಕ ಸಿಗರೇಟ್ ಉದ್ರಿ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ಆದರೆ ಅಂಗಡಿ ಮಾಲೀಕ ನರಸಿಂಹ ಉದ್ರಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕ ಅವರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಉದ್ರಿ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೃತ್ಯ ಎಸಗಿದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದರು ಎಂದು ಸ್ಥಳೀಯರು ಹೇಳಿರುವುದಾಗಿ ತಿಳಿದುಬಂದಿದ್ದು, ಈ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಡಿವೈಎಸ್ ಪಿ ಶಾಂತವೀರ, ಸಿಪಿಐ ಉಮೇಶ ಕಾಂಬ್ಳೆ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಕೃತ್ಯದ ಹಿಂದಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯ ಬಳಿಕ ತಿಳಿದುಬರಬೇಕಿದೆ.

Previous articleಸಿದ್ದಗಿರಿ ನ್ಯಾಚುರಲ್ಸ್ ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಅ.25ರಂದು
Next articleರಾಯಚೂರಿನಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸೃಜನ ಸಂಘಟನಾ ಅಭಿಯಾನ-2 ಆರಂಭ