ರಾಯಚೂರು: ನಗರದ ವಾರ್ಡ್ ನಂ.22ರಲ್ಲಿ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಅವರು ಭಾನುವಾರ ಮನೆ-ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಈ ಹಿಂದೆ ವಾರ್ಡ್ ನಂ.23ಕ್ಕೆ ಭೇಟಿ ನೀಡಿ ರಾಜಕಾಲುವೆ ಸಮಸ್ಯೆ ಕುರಿತು ಧ್ವನಿ ಎತ್ತಿ, ರಾಜಕಾಲುವೆಯಲ್ಲಿದ್ದ ತ್ಯಾಜ್ಯ ವಿಲೇವಾರಿಗೆ ಕಾರಣರಾಗಿದ್ದ ರಾಮನಗೌಡ ಏಗನೂರು ಅವರು ಇದೀಗ ವಾರ್ಡ್ ನಂ.22ರ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲಿಸಿದರು.

ಮನೆ-ಮನೆಗೆ ಭೇಟಿ ನೀಡಿದ ಅವರು, ನಿವಾಸಿಗಳಿಂದ ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಮುಖ್ಯವಾಗಿ ರಾಜಕಾಲುವೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು, ಚರಂಡಿ ಸ್ವಚ್ಛತೆ, ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗಳ ಕುರಿತು ನಿವಾಸಿಗಳು ಅಳಲು ತೋಡಿಕೊಂಡರು.

“ಚರಂಡಿ ಸ್ವಚ್ಛಗೊಳಿಸಿ ಎರಡು ತಿಂಗಳು ಕಳೆದಿವೆ. ಕುಡಿಯುವ ನೀರು ನಿಗದಿತ ಸಮಯಕ್ಕೆ ಬರುತ್ತಿಲ್ಲ. ರಸ್ತೆ ನಿರ್ಮಾಣ ಮಾಡುವುದಾಗಿ ರಸ್ತೆ ಅಗೆದು ಹೋಗಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ” ಎಂದು ನಿವಾಸಿಗಳು ಸಮಸ್ಯೆಗಳನ್ನು ವಿವರಿಸಿದರು.

ಈ ವೇಳೆ ಮಾತನಾಡಿದ ರಾಮನಗೌಡ ಏಗನೂರು, ನಗರದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಶಾಸಕ ಶಿವರಾಜ ಪಾಟೀಲ್ ಹಾಗೂ ಸಚಿವ ಎನ್.ಎಸ್. ಬೋಸರಾಜು ಅವರ ಪುತ್ರ ರವಿ ಬೋಸರಾಜು ವಿರುದ್ಧ ಅವರು ವಾಗ್ದಾಳಿ ನಡೆಸಿದರು.

15 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಶಾಸಕ ಶಿವರಾಜ ಪಾಟೀಲ್ ಹಾಗೂ ಮೂರು ವರ್ಷಗಳಿಂದ ಸಚಿವ ಸ್ಥಾನ ಅನುಭವಿಸಿರುವ ಎನ್.ಎಸ್. ಬೋಸರಾಜು ಅವರ ಪುತ್ರ ರವಿ ಬೋಸರಾಜು ಅವರು ಜನರಿಗೆ ಮೋಸ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ರಾಮನಗೌಡ ಏಗನೂರು ಆರೋಪಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ವರಲಕ್ಷ್ಮಿ ಸೇರಿದಂತೆ ವಾರ್ಡ್‌ನ ನಿವಾಸಿಗಳು ಉಪಸ್ಥಿತರಿದ್ದರು.

Previous articleಆರೋಗ್ಯ ಸಂಜೀವಿನಿ ಯೋಜನೆ: ಸರ್ಕಾರಿ ನೌಕರರ ಕಡ್ಡಾಯ ನೋಂದಣಿಗೆ ಆರಿಫ್ ಮಿಯಾ ಕರೆ
Next articleರಾಯಚೂರಿನಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ