​ಸಿರವಾರ: ಸಮೀಪದ ಯರಮರಸ್ ಗ್ರಾಮದ ಆರಾಧ್ಯ ದೈವ ಶ್ರೀ ಗುಡ್ಡದ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಭಕ್ತಿ-ಸಂಭ್ರಮಗಳಿಂದ ನೆರವೇರಿದ್ದು, ಸೋಮವಾರ ನಡೆದ ಜೋಡು ಉಚ್ಚಾಯ ಉತ್ಸವವು ಭಕ್ತಾದಿಗಳ ಮನಸೂರೆಗೊಂಡಿತು.

​ಜಾತ್ರೆಯ ಶುಭಸಂದರ್ಭದಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ನಯನಮನೋಹರ ಅಲಂಕಾರ ಸೇವೆಯನ್ನು ನೆರವೇರಿಸಲಾಯಿತು.
​ಉತ್ಸವದ ಪ್ರಮುಖ ಆಕರ್ಷಣೆಯಾಗಿ ಸ್ಥಳೀಯ ಶ್ರೀ ಹನುಮಾನ್ ದೇವಸ್ಥಾನದಿಂದ ವೈಭವದ ಮೆರವಣಿಗೆ ಆರಂಭಗೊಂಡಿತು. ಮಂಗಳವಾದ್ಯ, ಭಜನಾ ಮಂಡಳಿಗಳ ತಾಳ-ಮೇಳ ಮತ್ತು ಸಕಲ ಬಾಜಾ ಭಜಂತ್ರಿಗಳೊಂದಿಗೆ ಹೊರಟ ಉತ್ಸವದಲ್ಲಿ ಮಂಗಳಕಳಸ ಧರಿಸಿದ ಮುತ್ತೈದೆಯರು ಹಾಗೂ ನಂದಿಕೋಲು ಸೇವೆ ಸಾಗಿದ್ದು ಮೆರಗು ನೀಡಿತು. ನೂರಾರು ಭಕ್ತರ ಸಮ್ಮುಖದಲ್ಲಿ ಸಾಗಿದ ಪಲ್ಲಕ್ಕಿ ಮೆರವಣಿಗೆಯು ಗುಡ್ಡದ ಮೇಲಿರುವ ಶ್ರೀ ಬಸವೇಶ್ವರ ದೇವಾಲಯ ತಲುಪಿತು.

​ತರುವಾಯ ನೀಲಗಲ್ ಬೃಹನ್ಮಠ ದ ಪೂಜ್ಯ ಶ್ರೀ ಡಾ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಲೂರಿನ ಪೂಜ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನಪುರದ ಪೂಜ್ಯ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹಾಗು ವೇ. ಮೂ. ಚರಬಸವ ತಾತನವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ‘ಜೋಡು ಉಚ್ಚಾಯ’ ನೆರವೇರಿತು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಜಯಘೋಷಗಳನ್ನು ಮೊಳಗಿಸಿ, ಧನ್ಯತೆ ಮೆರೆದರು.

Previous articleಸಿರವಾರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಜಂಟಿ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಭೇಟಿ
Next articleಶ್ರಾವಣದ ಕೊನೆಯ ಸೋಮವಾರ: ದೇವಸುಗೂರಿನ ಶ್ರೀ ಸುಗೂರೇಶ್ವರ ದೇವಸ್ಥಾನಕ್ಕೆ ಶಾಸಕ ಬಸನಗೌಡ ದದ್ದಲ್ ಭೇಟಿ