ಸಿರವಾರ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಪ್ರಭಾರಿ ಜಿಲ್ಲಾ ಉಸ್ತುವಾರಿ ಶ್ರೀ ಉಜ್ವಲ್ ಕುಮಾರ್ ಘೋಷ್ ಅವರು ತಾಲೂಕಿನ ಹರವಿ, ಹಿರೇಹಣಗಿ ಹಾಗೂ ಕವಿತಾಳ ಪಟ್ಟಣಗಳಿಗೆ ಬುಧವಾರ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಖುದ್ದು ಪರಿಶೀಲಿಸಿದರು.

ಕೇಂದ್ರ ಸರ್ಕಾರದ ‘ಸಂಪೂರ್ಣತಾ ಮಹತ್ವಾಕಾಂಕ್ಷಿ ಕಾರ್ಯಕ್ರಮ’ದಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಯಲ್ಲಿ ಭಾಗವಹಿಸಿ, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ, ಆರೋಗ್ಯ ವಲಯ ಮತ್ತು ಗರ್ಭಿಣಿಯರ ಆರೈಕೆ, ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾವಣೆಯ ಅರಿವು ಮೂಡಿಸಲು ಸೂಚಿಸಿದರು. ‘ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ’ದಡಿ ಗರ್ಭಿಣಿಯರ ತಪಾಸಣೆ, ತಾಯಿಕಾರ್ಡ್ ಹಾಗೂ ಮೂಲಸೌಕರ್ಯಗಳ ನಿರ್ವಹಣೆಯನ್ನು ಪರಿಶೀಲಿಸಿದರು.
ಅಂಗನವಾಡಿ ಉಸ್ತುವಾರಿ,ಅಂಗನವಾಡಿ ಕೇಂದ್ರ-23ರ ಪರಿಶೀಲನೆ ನಡೆಸಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ನಿರಂತರ ನಿಗಾ ವಹಿಸುವುದು, ತೂಕ ತಪಾಸಣೆ ಹಾಗೂ ಪೌಷ್ಟಿಕ ಆಹಾರ ಪೂರೈಕೆಯನ್ನು ಖಾತರಿಪಡಿಸಲು ನಿರ್ದೇಶನ ನೀಡಿದರು.
ಉದ್ಯೋಗ ಖಾತ್ರಿ ಹಾಗೂ ಜಲ ಜೀವನ ಮಿಷನ್, ಹರವಿ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ವಿ.ಬಿ.ಜಿ. ರಾಮ್ಜಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸೂಕ್ತ ಉದ್ಯೋಗ ಒದಗಿಸಲು ಸೂಚಿಸಿದರು.
ಬಳಿಕ ಹಿರೇಹಣಗಿ ಗ್ರಾಮದಲ್ಲಿ ಮನೆ-ಮನೆಗೆ ನಳ ಸಂಪರ್ಕದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಶಿಕ್ಷಣ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್, ಕವಿತಾಳದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಬೋಧಿಸಿ, ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಿಸಿದರು. ನಂತರ ಶಾಲೆಯ ‘ಅಟಲ್ ಟಿಂಕರಿಂಗ್ ಲ್ಯಾಬ್’ನಲ್ಲಿ (ATL) ವಿದ್ಯಾರ್ಥಿಗಳು ರೂಪಿಸಿದ್ದ ಸೆನ್ಸಾರ್, ಸ್ಮಾರ್ಟ್ ವಿದ್ಯಾಲಯ ಹಾಗೂ 3D ಪ್ರಿಂಟರ್ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿಕೊಂಡರು.
ಈ ತನಿಖಾ ಭೇಟಿಯ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಡಿಎಚ್ಒ ಡಾ. ನಂದಿತಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓ ಪ್ರದೀಪ ನಂದರೆಡ್ಡಿ,ಸ್ಥಳೀಯ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.








