ರಾಯಚೂರು: ರಾಯಚೂರು ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಹಾಗೂ ಮೂಲಸೌಕರ್ಯಗಳ ಬೇಡಿಕೆಯನ್ನು ಈಗಿನಿಂದಲೇ ಅಂದಾಜಿಸಿ ಯೋಜನೆ ರೂಪಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಪ್ರಸ್ತುತ ಅಗತ್ಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಬದಲು, ಮುಂದಿನ 10–20 ವರ್ಷಗಳ ಅಗತ್ಯವನ್ನೂ ಪರಿಗಣಿಸಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಮಗ್ರ ದೀರ್ಘಾವಧಿ ಯೋಜನೆ ಸಿದ್ಧಪಡಿಸಬೇಕು ಎಂದು ಸಚಿವರು ಹೇಳಿದರು.
68 ಎಂಎಲ್‌ಡಿ ನೀರಿನ ಅಗತ್ಯ; 15 ಎಂಎಲ್‌ಡಿ ಕೊರತೆ
ರಾಯಚೂರು ನಗರದಲ್ಲಿ ಪ್ರಸ್ತುತ ಸುಮಾರು 3.5 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ನಗರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ನೀರಿನ ಬೇಡಿಕೆಯನ್ನು ಪೂರೈಸುವ ವ್ಯವಸ್ಥೆ ಅಗತ್ಯ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ನಗರಕ್ಕೆ ಸದ್ಯ 52 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಪ್ರಸ್ತುತ ಅಗತ್ಯ ಸುಮಾರು 68 ಎಂಎಲ್‌ಡಿ ಇರುವುದರಿಂದ ಸುಮಾರು 15 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ಅಭಿವೃದ್ಧಿ ಆಯುಕ್ತ ಭರತಕುಮಾರ ಮಾಹಿತಿ ನೀಡಿದರು.
ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನೀರಿನ ಲಭ್ಯತೆಯನ್ನು ಆಧರಿಸಿ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ನಿಜಾಮರ ಕಾಲದಿಂದ ಬಳಕೆಯಲ್ಲಿರುವ ಹಳೆಯ ಪೈಪ್‌ಲೈನ್‌ಗಳನ್ನು ಹಂತ ಹಂತವಾಗಿ ಬದಲಾಯಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದರು.
24 ಗಂಟೆ ನೀರು ಪೂರೈಕೆ ಯೋಜನೆಗೆ ಮತ್ತೆ ಚಾಲನೆ
ರಾಯಚೂರು ನಗರಕ್ಕೆ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೆ ಈಗಾಗಲೇ ಮಂಜೂರಾತಿ ದೊರೆತಿದೆ. ಯೋಜನೆಯಡಿ ಒಟ್ಟು 524 ಕಿ.ಮೀ. ಪೈಪ್‌ಲೈನ್ ಅಳವಡಿಸಬೇಕಿದ್ದು, ಈವರೆಗೆ ಕೇವಲ 6 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.
ಗುತ್ತಿಗೆದಾರರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ತಡೆಯಾಜ್ಞೆ ತೆರವಾಗಿರುವ ಹಿನ್ನೆಲೆಯಲ್ಲಿ ಬಾಕಿ ಕಾಮಗಾರಿಯನ್ನು ಶೀಘ್ರ ಪುನರಾರಂಭಿಸಬೇಕಾಗಿದೆ ಎಂದು ಪಾಲಿಕೆ ಆಯುಕ್ತರು ಸಭೆಗೆ ವಿವರಿಸಿದರು.
ಇದೇ ವೇಳೆ, ಅರ್ಬನ್ ಚಾಲೆಂಜ್ ಯೋಜನೆಯಡಿ ₹500 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಹಳೆಯ ಪೈಪ್‌ಲೈನ್ ಬದಲಾವಣೆಗೆ ₹10 ಕೋಟಿ:
ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಅವರು ಮಾತನಾಡಿ, ನಗರದ ನೀರಿನ ಕೊರತೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಸುಮಾರು 18 ಕಿ.ಮೀ. ಹಳೆಯ ಪೈಪ್‌ಲೈನ್ ಬದಲಾವಣೆ ಸೇರಿದಂತೆ ವಿವಿಧ ನೀರು ಸರಬರಾಜು ಕಾಮಗಾರಿಗಳಿಗೆ ಕೆಕೆಆರ್‌ಡಿಬಿಯ ₹10 ಕೋಟಿ ಅನುದಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಗುರ್ಜಾಪುರ ಜಲಾಶಯದಿಂದ ನೀರು ತರಲು ಪರ್ಯಾಯ ಯೋಜನೆ
ಗಣೇಕಲ್ ಜಲಾಶಯದಿಂದ ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ರೈತರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ನೀರಿನ ಮೂಲದ ಬಗ್ಗೆ ಚಿಂತನೆ ನಡೆಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಗಣೇಕಲ್ ಬದಲು ಗುರ್ಜಾಪುರ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ತರಲು ಪರ್ಯಾಯ ಯೋಜನೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ನೀರು ಶುದ್ಧೀಕರಣ ಘಟಕಗಳ ಸ್ಥಿತಿಗತಿ ಪರಿಶೀಲನೆ:
ದೇವಸೂಗೂರು ಹಾಗೂ ಚಿಕ್ಕಸೂಗೂರು ನೀರು ಶುದ್ಧೀಕರಣ ಘಟಕಗಳ ಕಾರ್ಯನಿರ್ವಹಣೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು.
ಸ್ಥಗಿತಗೊಂಡಿರುವ ಘಟಕಗಳನ್ನು ನವೀಕರಿಸುವ ಮೂಲಕ ನಗರದ ನೀರು ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಎ. ವಸಂತಕುಮಾರ ಸಲಹೆ ನೀಡಿದರು.
ಚಿಕ್ಕಸೂಗೂರು ಶುದ್ಧೀಕರಣ ಘಟಕದ ನವೀಕರಣಕ್ಕೆ ಹೆಚ್ಚಿನ ಅನುದಾನ ಅಗತ್ಯವಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಘಟಕಕ್ಕೆ ಸಂಬಂಧಿಸಿದ ಭೂಮಿಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಲು ಕಾಯ್ದಿರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಜುಬಿನ್ ಮೊಹಾಪಾತ್ರ ತಿಳಿಸಿದರು.
60 ಸಾವಿರ ಮನೆಗಳಿಗೆ ಒಳಚರಂಡಿ ಸಂಪರ್ಕ:
ರಾಯಚೂರು ನಗರದಲ್ಲಿ ಸುಮಾರು 60 ಸಾವಿರ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 16.5 ಎಂಎಲ್‌ಡಿ ನೀರನ್ನು ಶುದ್ಧೀಕರಿಸುವ ಅಗತ್ಯವಿದ್ದು, ಪ್ರಸ್ತುತ ಸುಮಾರು 33.5 ಎಂಎಲ್‌ಡಿ ನೀರನ್ನು ಟ್ರೀಟ್‌ಮೆಂಟ್ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ನಗರದ 35 ಸ್ಲಂ ಪ್ರದೇಶಗಳು ಹಾಗೂ ಹೊಸ ಮತ್ತು ಹಳೆಯ ಆಶ್ರಯ ಕಾಲೋನಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಅರ್ಬನ್ ಚಾಲೆಂಜ್ ಯೋಜನೆಯಡಿ ₹135 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಾಣಿಜ್ಯ ಸಂಕೀರ್ಣ ಹಾಗೂ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಯಿತು.
ಅಮೃತ್ 2 ಯೋಜನೆಯಡಿ ₹5 ಕೋಟಿ ಪ್ರಸ್ತಾವನೆ
ಅಮೃತ್ 2 ಯೋಜನೆಯಡಿ ನೀರಿಭಾವಿಕುಂಟಾ ಹಾಗೂ ಮಂಚಲಾಪುರ ಸೇರಿದಂತೆ ವಿವಿಧ ಪ್ರದೇಶಗಳ ಅಭಿವೃದ್ಧಿಗೆ ₹5 ಕೋಟಿ ಮೊತ್ತದ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಘನತ್ಯಾಜ್ಯ ನಿರ್ವಹಣೆಗೆ ಸಚಿವರ ಸೂಚನೆ
ನಗರದ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಕಸ ಸಂಗ್ರಹವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಮನವಿ ಮಾಡಿದರು.
ನಗರದ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಮಾತನಾಡಿ, ನಗರದ ನೀರು ಸರಬರಾಜು ಜಾಲ ಸಮರ್ಪಕವಾಗಿಲ್ಲದಿರುವುದರಿಂದ ಸೋರಿಕೆ ಹಾಗೂ ನೀರು ಪೂರೈಕೆಯಲ್ಲಿ ಅವ್ಯವಸ್ಥೆ ಉಂಟಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್. ಸೇರಿದಂತೆ ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.








