ಮೂಲ: ಪಿಐಬಿ(ಬೆಂಗಳೂರು)
ಪಣಜಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2029ರ ವೇಳೆಗೆ ‘ಮಾದಕ ವಸ್ತು ಮುಕ್ತ ಭಾರತ’ದ ಸಂಕಲ್ಪವನ್ನು ಈಡೇರಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.
ಗೋವಾದ ರಾಜಧಾನಿ ಪಣಜಿಯಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದ ರೀತಿಯಲ್ಲೇ ಮಾದಕ ವಸ್ತುಗಳ ಸಮಸ್ಯೆಯನ್ನೂ ನಿರ್ಮೂಲನೆ ಮಾಡುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎಂದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.
ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಮೋದಿ ಸರ್ಕಾರ ರಾಷ್ಟ್ರೀಯ ಭದ್ರತೆಯ ಪ್ರಮುಖ ಆದ್ಯತೆಯನ್ನಾಗಿ ಮಾಡಿದೆ. 2019ರಿಂದ ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಸಮಗ್ರ ಹಾಗೂ ರಾಷ್ಟ್ರೀಯ ಮಟ್ಟದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
2019ರಲ್ಲಿ ನಾಲ್ಕು ಹಂತಗಳ ಎನ್‌ಸಿಒಆರ್‌ಡಿ (NCORD) ವ್ಯವಸ್ಥೆ ರೂಪಿಸಲಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾದಕ ವಸ್ತು ನಿಗ್ರಹ ಕಾರ್ಯಪಡೆಗಳನ್ನು ರಚಿಸಲಾಗಿದೆ. ನಿಡಾನ್ (NIDAAN) ಪೋರ್ಟಲ್ ಮೂಲಕ ಮಾದಕ ವಸ್ತು ಅಪರಾಧಿಗಳ ರಾಷ್ಟ್ರೀಯ ಡೇಟಾಬೇಸ್ ರೂಪಿಸಲಾಗಿದ್ದು, CCTNS ಸೇರಿದಂತೆ ವಿವಿಧ ಮಾಹಿತಿಗಳ ಆಧಾರದ ಮೇಲೆ ಮಾದಕ ವಸ್ತುಗಳ ಹಾಟ್‌ಸ್ಪಾಟ್‌ಗಳು, ಸಾಗಣೆ ವಿಧಾನಗಳು ಮತ್ತು ವಶಪಡಿಸಿಕೊಳ್ಳುವಿಕೆಗಳ ಡೇಟಾ ಆಧಾರಿತ ನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಮಾದಕ ವಸ್ತು ಪ್ರಕರಣಗಳ ತನಿಖೆಯಲ್ಲಿ ಬಾಟಮ್-ಟು-ಟಾಪ್ ಮತ್ತು ಟಾಪ್-ಟು-ಬಾಟಮ್ ಎಂಬ ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಣ್ಣ ಪ್ರಮಾಣದ ಮಾದಕ ವಸ್ತು ಪ್ಯಾಕೆಟ್ ವಶಪಡಿಸಿಕೊಂಡರೂ ಅದರ ಮೂಲವನ್ನು ಪತ್ತೆಹಚ್ಚಲಾಗುವುದು. ಅದೇ ರೀತಿ ಗಡಿಯಲ್ಲಿ ದೊಡ್ಡ ಪ್ರಮಾಣದ ಸಾಗಣೆ ಪತ್ತೆಯಾದರೆ ಅದು ಸಣ್ಣ ಪ್ಯಾಕೆಟ್‌ಗಳ ರೂಪದಲ್ಲಿ ಯುವಕರಿಗೆ ಹೇಗೆ ತಲುಪುತ್ತದೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಡಾರ್ಕ್‌ನೆಟ್, ಎನ್‌ಕ್ರಿಪ್ಟ್ ಮಾಡಿದ ಸಂವಹನ, ಕ್ರಿಪ್ಟೋ ವಹಿವಾಟುಗಳು ಮತ್ತು ಡೆಡ್ ಡ್ರಾಪ್ ಡೆಲಿವರಿ ವಿರುದ್ಧ ತಂತ್ರಜ್ಞಾನ ಆಧಾರಿತ ತನಿಖೆ ನಡೆಸಲಾಗುತ್ತಿದೆ. ಆರ್ಥಿಕ ತನಿಖೆ ಮತ್ತು PIT-NDPS ಕಾಯ್ದೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅಮಿತ್ ಶಾ ಹೇಳಿದರು.
2004ರಿಂದ 2014ರವರೆಗೆ ₹40,000 ಕೋಟಿ ಮೌಲ್ಯದ 26 ಲಕ್ಷ ಕಿಲೋಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2014ರಿಂದ 2026ರವರೆಗೆ ₹1.89 ಲಕ್ಷ ಕೋಟಿ ಮೌಲ್ಯದ 1.19 ಕೋಟಿ ಕಿಲೋಗ್ರಾಂಗೂ ಹೆಚ್ಚು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಇದೇ ಅವಧಿಯಲ್ಲಿ ಮಾದಕ ವಸ್ತುಗಳ ನಾಶಪಡಿಸುವಿಕೆಯ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ ಎಂದರು.
‘ನಶಾ ಮುಕ್ತ ಭಾರತ ಅಭಿಯಾನ’ದಡಿ 25 ಕೋಟಿ ನಾಗರಿಕರನ್ನು ತಲುಪಿ ಪ್ರತಿಜ್ಞಾವಿಧಿ ಬೋಧಿಸಲಾಗಿದೆ. ಚಿಕಿತ್ಸೆ ಮತ್ತು ಪುನರ್ವಸತಿ ಮೂಲಕ 5.70 ಲಕ್ಷ ನಾಗರಿಕರನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಜುಲೈ 2026ರಿಂದ ಜುಲೈ 2029ರವರೆಗೆ ಮೂರು ವರ್ಷಗಳ ಕಾರ್ಯಯೋಜನೆ ರೂಪಿಸಲಾಗಿದ್ದು, 2026-29ರ ಅವಧಿಯನ್ನು ‘ಮಿಷನ್ ಮೋಡ್’ನಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಕಾರ್ಯಯೋಜನೆ ನಾಲ್ಕು ಪ್ರಮುಖ ಸ್ತಂಭಗಳನ್ನು ಹೊಂದಿದೆ. ಅವುಗಳೆಂದರೆ ಗುಪ್ತಚರ ಮಾಹಿತಿ ಮತ್ತು ಕಾರ್ಯಾಚರಣೆ ಆಧಾರಿತ ಜಾರಿ, ಪ್ರಿಕರ್ಸರ್ ಹಾಗೂ ಸಿಂಥೆಟಿಕ್ ಡ್ರಗ್ಸ್ ನಿಯಂತ್ರಣ, ಬೇಡಿಕೆ ಮತ್ತು ಹಾನಿ ಕಡಿತ, ಸಾಮರ್ಥ್ಯ ವೃದ್ಧಿ ಮತ್ತು ಸಮನ್ವಯ ಎಂದು ಅಮಿತ್ ಶಾ ವಿವರಿಸಿದರು.
ಮಾದಕ ವಸ್ತು ಕಿಂಗ್‌ಪಿನ್‌ಗಳ ಮಾಹಿತಿ ಸಂಗ್ರಹ, ಜಾಲದ ಮುಂದಿನ ಮತ್ತು ಹಿಂದಿನ ಸಂಪರ್ಕಗಳ ಪತ್ತೆ, ವಾಣಿಜ್ಯ ಪ್ರಮಾಣದ ಪ್ರಕರಣಗಳಲ್ಲಿ ಹಣಕಾಸು ತನಿಖೆ ಹಾಗೂ ಗಡಿ, ಬಂದರು, ವಿಮಾನ ನಿಲ್ದಾಣ ಮತ್ತು ಕಾರ್ಗೋ ಪ್ರದೇಶಗಳಲ್ಲಿ ಅಪಾಯ ಆಧಾರಿತ ತಪಾಸಣೆಗೆ ಒತ್ತು ನೀಡಲಾಗುವುದು ಎಂದರು.
ಶೈಕ್ಷಣಿಕ ಸಂಸ್ಥೆಗಳನ್ನು ಮಾದಕ ವಸ್ತು ಮುಕ್ತಗೊಳಿಸುವ ಉದ್ದೇಶದಿಂದ ಶಿಕ್ಷಣ ಸಚಿವಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಗಳು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಕಾರ್ಯನಿರ್ವಹಿಸಲಿವೆ. ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಮೈ ಭಾರತ್ ಮೂಲಕ ಲಕ್ಷಾಂತರ ‘ನಶಾಮುಕ್ತಿ ಮಿತ್ರ’ರನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.
ಸಾಮಾಜಿಕ ನ್ಯಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಾರಾಗೃಹ ಆಡಳಿತದ ಸಹಯೋಗದಲ್ಲಿ ಮಾದಕ ವಸ್ತು ಮುಕ್ತಿ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿ 1,751ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 10 ಸಾವಿರ ಸ್ವಯಂಸೇವಕರು ಅಭಿಯಾನದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದರು.
ಮಾರ್ಚ್ 2027ರ ವೇಳೆಗೆ ಪ್ರತಿಯೊಂದು ರಾಜ್ಯದಲ್ಲೂ ಸಂಪೂರ್ಣ ಸಜ್ಜುಗೊಂಡ ಮಾದಕ ವಸ್ತು ನಿಗ್ರಹ ಕಾರ್ಯಪಡೆ ರಚಿಸಲು ಕೇಂದ್ರ ನೆರವು ನೀಡಲಾಗುವುದು. ವಿಧಿವಿಜ್ಞಾನ ವರದಿಗಳನ್ನು 30 ದಿನಗಳೊಳಗೆ ಪಡೆಯುವ ವ್ಯವಸ್ಥೆ ಮಾಡಲಾಗುವುದು. ನಾಲ್ಕು ಸ್ತಂಭಗಳ ಅಡಿಯಲ್ಲಿ 25 ಘಟಕಗಳು ಮತ್ತು 200ಕ್ಕೂ ಹೆಚ್ಚು ಕ್ರಿಯಾ ಬಿಂದುಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ‘ಡೆತ್ ಟ್ರಯಾಂಗಲ್’ ಮತ್ತು ‘ಡೆತ್ ಕ್ರೆಸೆಂಟ್’ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. “ವಿದೇಶಿಯರಿಗೆ ಭಾರತಕ್ಕೆ ಸ್ವಾಗತವಿದೆ, ಆದರೆ ಮಾದಕ ವಸ್ತುಗಳೊಂದಿಗೆ ಅಲ್ಲ” ಎಂದು ಅಮಿತ್ ಶಾ ಹೇಳಿದರು.
ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದಂತೆಯೇ, ಅದೇ ಸಂಕಲ್ಪದೊಂದಿಗೆ ಮಾದಕ ವಸ್ತುಗಳ ಸಮಸ್ಯೆಯನ್ನೂ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಪುನರುಚ್ಚರಿಸಿದರು.
ಮೂಲ: PIB Bengaluru




