ಬೆಂಗಳೂರು: ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ 17 ಜಿಲ್ಲೆಗಳನ್ನು ಒಳಗೊಂಡ ಐದು ಪ್ರಮುಖ ರೈಲ್ವೆ ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಒಟ್ಟು ₹10,021 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, 2029-30ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಅನುಮೋದನೆಗೊಂಡ ಯೋಜನೆಗಳಲ್ಲಿ ಅರಕ್ಕೋಣಂ–ರೇಣಿಗುಂಟ 3ನೇ ಮತ್ತು 4ನೇ ಮಾರ್ಗ (77 ಕಿ.ಮೀ.), ವೈಟ್‌ಫೀಲ್ಡ್–ಬಂಗಾರಪೇಟೆ 3ನೇ ಮತ್ತು 4ನೇ ಮಾರ್ಗ (47 ಕಿ.ಮೀ.), ಹೊಸೂರು–ಓಮಲೂರು ದ್ವಿಪಥ (147 ಕಿ.ಮೀ.), ಸೇಲಂ–ಕರೂರು–ದಿಂಡಿಗಲ್ ದ್ವಿಪಥ (159 ಕಿ.ಮೀ.) ಹಾಗೂ ಸಿಕಂದರಾಬಾದ್ (ಘಾಟ್‌ಕೇಸರ್)–ಕಾಜಿಪೇಟ ಮಲ್ಟಿಟ್ರ್ಯಾಕಿಂಗ್ (110 ಕಿ.ಮೀ.) ಸೇರಿವೆ.

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲಕ್ಕೆ ಸುಮಾರು 540 ಕಿ.ಮೀ. ಹೆಚ್ಚುವರಿ ಮಾರ್ಗ ಸಾಮರ್ಥ್ಯ ದೊರೆಯಲಿದೆ. ಇದರಿಂದ ರೈಲುಗಳ ಓಡಾಟ ಹೆಚ್ಚಿಸುವುದರ ಜತೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಿ, ರೈಲು ಸೇವೆಗಳ ಕಾರ್ಯಾಚರಣಾ ದಕ್ಷತೆ ಹಾಗೂ ವಿಶ್ವಾಸಾರ್ಹತೆ ಸುಧಾರಿಸುವ ನಿರೀಕ್ಷೆಯಿದೆ.

ಯೋಜನೆಗಳು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಸಮಗ್ರ ಯೋಜನೆ ಹಾಗೂ ವಿವಿಧ ಪಾಲುದಾರರ ಸಮಾಲೋಚನೆಯೊಂದಿಗೆ ರೂಪಿಸಲಾಗಿದ್ದು, ಬಹುಮಾದರಿ ಸಂಪರ್ಕ ಮತ್ತು ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ. ಜನರು, ಸರಕುಗಳು ಮತ್ತು ಸೇವೆಗಳ ಸಂಚಾರಕ್ಕೆ ತಡೆರಹಿತ ಸಂಪರ್ಕ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಐದು ಯೋಜನೆಗಳಿಂದ ಸುಮಾರು 52 ಲಕ್ಷ ಜನಸಂಖ್ಯೆ ಹೊಂದಿರುವ 2,121 ಗ್ರಾಮಗಳಿಗೆ ರೈಲು ಸಂಪರ್ಕ ಮತ್ತು ಸಾರಿಗೆ ಸಾಮರ್ಥ್ಯ ಮತ್ತಷ್ಟು ಸುಧಾರಿಸಲಿದೆ. ತಿರುಪತಿ, ತಿರುತ್ತಣಿಯ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ತಿರುಚನೂರಿನ ಶ್ರೀ ಪದ್ಮಾವತಿ ಅಮ್ಮಾವಾರಿ ದೇವಾಲಯ, ಕೋಟಿಲಿಂಗೇಶ್ವರ ದೇವಾಲಯ, ಬಂಗಾರು ತಿರುಪತಿ, ಕೋಲಾರ ಚಿನ್ನದ ಗಣಿ, ಹೊಗೇನಕಲ್ ಜಲಪಾತ, ಹೊಸೂರು ಕೋಟೆ, ಮೆಟ್ಟೂರು ಅಣೆಕಟ್ಟು, ಕೊಡೈಕೆನಾಲ್ ಬೆಟ್ಟಗಳು, ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ, ನಾಮಕ್ಕಲ್ ಆಂಜನೇಯ ದೇವಾಲಯ, ನಾಮಕ್ಕಲ್ ಕೋಟೆ, ಕಲ್ಯಾಣ ಪಶುಪತೀಶ್ವರ ದೇವಾಲಯ, ಯಾದಗಿರಿಗುಟ್ಟ ದೇವಾಲಯ, ಭೋಂಗೀರ್ ಕೋಟೆ, ಸುರೇಂದ್ರಪುರಿ ಹಾಗೂ ಸ್ವರ್ಣಗಿರಿ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವೂ ಸುಧಾರಿಸಲಿದೆ.

ಇದಲ್ಲದೆ, ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ಆಟೋಮೊಬೈಲ್, ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ರಸಗೊಬ್ಬರಗಳಂತಹ ಸರಕುಗಳ ಸಾಗಣೆಗೆ ಈ ಮಾರ್ಗಗಳು ಪ್ರಮುಖವಾಗಿವೆ. ಯೋಜನೆಗಳ ಮೂಲಕ ವರ್ಷಕ್ಕೆ ಸುಮಾರು 4.7 ಕೋಟಿ ಟನ್‌ಗಳಷ್ಟು ಹೆಚ್ಚುವರಿ ಸರಕು ಸಾಗಣೆ ಸಾಮರ್ಥ್ಯ ಸೃಷ್ಟಿಯಾಗಲಿದೆ.

ರೈಲು ಸಾರಿಗೆಯ ಬಳಕೆ ಹೆಚ್ಚುವುದರಿಂದ ರಸ್ತೆ ಸಾರಿಗೆಯ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ವರ್ಷಕ್ಕೆ ಸುಮಾರು 8 ಕೋಟಿ ಲೀಟರ್ ತೈಲ ಉಳಿತಾಯ ಹಾಗೂ ಸುಮಾರು 42 ಕೋಟಿ ಕೆ.ಜಿ. ಇಂಗಾಲದ ಹೊರಸೂಸುವಿಕೆ ಕಡಿತವಾಗುವ ನಿರೀಕ್ಷೆಯಿದೆ. ಇದು ಸುಮಾರು 2 ಕೋಟಿ ಗಿಡಗಳನ್ನು ನೆಡುವುದಕ್ಕೆ ಸಮಾನವಾದ ಪರಿಸರ ಪ್ರಯೋಜನ ನೀಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಯೋಜನೆಗಳು ದಕ್ಷಿಣ ಭಾರತದ ರೈಲು ಮೂಲಸೌಕರ್ಯವನ್ನು ಬಲಪಡಿಸುವುದರೊಂದಿಗೆ ಪ್ರಾದೇಶಿಕ ಆರ್ಥಿಕ ಚಟುವಟಿಕೆ, ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

Previous articleಚಿಂಚರಕಿಯಲ್ಲಿ ಸಡಗರದ ಶ್ರೀ ಮಾರಿಕಾಂಬ ದೇವಾಲಯ ಲೋಕಾರ್ಪಣೆ
Next articleಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ