ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರು ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ಹತಾಶೆಯ ಸಂಕೇತ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಜಯ್ ಸಿಂಗ್ ಟೀಕಿಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾತನಾಡಲು ಬೇರೆ ಯಾವುದೇ ವಿಚಾರಗಳಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಸಮರ್ಪಕವಾಗಿ ಚರ್ಚಿಸಿಲ್ಲ ಎಂದು ಆರೋಪಿಸಿದರು.
ಬಿ. ನಾಗೇಂದ್ರ ಅವರು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ಹತಾಶೆಯನ್ನು ತೋರಿಸುತ್ತದೆ. ಈ ಪಾದಯಾತ್ರೆ ಬಿಜೆಪಿಗೆ ‘ಜ್ಞಾನೋದಯ ಯಾತ್ರೆ’ಯಾಗಲಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಪ್ರಮುಖ ನಾಯಕರು ಪಾದಯಾತ್ರೆಯಿಂದ ದೂರ ಉಳಿದಿದ್ದಾರೆ. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವೇ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.








