ಸಿರವಾರ: ಮುಂಗಾರು ಮಳೆಯ ವೈಫಲ್ಯ ಹಾಗೂ ಕಾಲುವೆಗಳಿಗೆ ನೀರು ಹರಿಯದೇ ಇರುವುದರಿಂದ ಸಿರವಾರ ಮತ್ತು ಮಾನ್ವಿ ತಾಲೂಕುಗಳಲ್ಲಿ ಹತ್ತಿ, ಭತ್ತ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ಒಣಗಿ ನಾಶವಾಗುತ್ತಿವೆ. ಸಾಲ ಸೋಲ ಮಾಡಿ ಬೆಳೆದ ಪೈರು ಕಣ್ಣೆದುರೇ ಒಣಗುತ್ತಿರುವುದನ್ನು ನೋಡಲಾಗದ ರೈತರು, ಭೂಮಿಯನ್ನು ಹದಗೊಳಿಸಿ ಪರ್ಯಾಯ ಬೆಳೆ ಬೆಳೆಯಲು ಒಣಗಿದ ಪೈರುಗಳನ್ನು ತೆರವುಗೊಳಿಸುತ್ತಿದ್ದಾರೆ.
ರೈತರು ಜಮೀನುಗಳನ್ನು ಖಾಲಿ ಮಾಡುವ ಮುನ್ನವೇ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ (GPS) ಆಧಾರಿತ ಸಮೀಕ್ಷೆ ನಡೆಸಬೇಕು ಎಂದು ಬಿಜೆಪಿ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ಪಾವತಿಸಿರುವ ರೈತರ ಜಮೀನುಗಳಲ್ಲಿ ತೆರವು ಕಾರ್ಯಕ್ಕೂ ಮುನ್ನವೇ ತುರ್ತಾಗಿ ನೈಜ ಹಾನಿಯನ್ನು ದಾಖಲಿಸಬೇಕು. ನಂತರ ಸಮೀಕ್ಷೆ ನಡೆಸಿದರೆ ರೈತರಿಗೆ ವಿಮೆ ನಷ್ಟವಾಗುವ ಭೀತಿಯಿದೆ.
ಸಿರವಾರ ತಾಲೂಕಿನಾದ್ಯಂತ ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶಗಳ ನೈಜ ಪರಿಸ್ಥಿತಿಯ ವರದಿ ಸಿದ್ಧಪಡಿಸಿ, ತಾಲೂಕನ್ನು ಕೂಡಲೇ ‘ಬರಪೀಡಿತ’ ಎಂದು ಸರ್ಕಾರ ಘೋಷಿಸಬೇಕು.
ಬೆಳೆ ಹಾನಿಗೊಳಗಾದ ಅರ್ಹ ರೈತರಿಗೆ ವಿಮಾ ಕಂಪನಿಗಳಿಂದ ವಿಮಾ ಪರಿಹಾರ ಹಾಗೂ ಸರ್ಕಾರದಿಂದ ಬರ ಪರಿಹಾರದ ಹಣವನ್ನು ವಿಳಂಬವಿಲ್ಲದೆ ತಲುಪಿಸಬೇಕು.
ಬೆಳೆ ನಷ್ಟದಿಂದ ಅನ್ನದಾತ ತೀವ್ರ ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣವೇ ಸ್ಪಂದಿಸಿ ರೈತರ ನೆರವಿಗೆ ಧಾವಿಸಬೇಕೆಂದು ಅವರು ಆಗ್ರಹಿಸಿದ್ದಾರೆ.








