ರಾಯಚೂರು: ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುತ್ತಿರುವ ಅಸ್ಥಿರ ವಿದ್ಯುತ್ ಪೂರೈಕೆ ಹಾಗೂ ರೈತರು ಮತ್ತು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು GESCOM ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ಭಾಗದ ವಿದ್ಯುತ್ ಪೂರೈಕೆ, ರೈತರಿಗೆ ಎದುರಾಗುತ್ತಿರುವ ತೊಂದರೆಗಳು ಹಾಗೂ ವಿವಿಧೆಡೆ ನಡೆಯುತ್ತಿರುವ ವಿದ್ಯುತ್ ಕಾಮಗಾರಿಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ GESCOM ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಪ್ರಸ್ತುತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದರು.
ಇಂಧನ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ ಶಾಸಕರು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು ಹಾಗೂ ಇದರಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಕುರಿತು ಗಮನಕ್ಕೆ ತಂದರು.
ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಎಲ್ಲಾ ಕಾರ್ಯನಿರ್ವಾಹಕ ಅಭಿಯಂತರರು (EE) ಹಾಗೂ ಸಹಾಯಕ ಅಭಿಯಂತರರು (AEE) ಭೇಟಿ ನೀಡಿ, ಗ್ರಾಮಸ್ಥರು ಮತ್ತು ರೈತರೊಂದಿಗೆ ನೇರವಾಗಿ ಸಮನ್ವಯ ಸಾಧಿಸಬೇಕು. ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಗ್ರಾಮೀಣ ಜನಜೀವನಕ್ಕೆ ವಿದ್ಯುತ್ ಪೂರೈಕೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ವಿದ್ಯುತ್ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.
ಸಭೆಯಲ್ಲಿ EE ಮೋಹನ್, KPTCL EE ಶೈಕ್ ದೌಲತ್, CLM ಬಸವರಾಜ್, AEE ನಟರಾಜ್, ರಾಜೇಶ್ (220 KV), ರವಿ, ಸೊಹೈಲ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.








