ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅರ್ಚಕರ ಮೇಲೆ ಹಲ್ಲೆ ನಡೆಸಿ, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಮಾನ್ವಿ ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಕಿಡಿಗಣಯ್ಯಸ್ವಾಮಿ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ತಾಲೂಕಿನ ನೀರಮಾನ್ವಿ ಗ್ರಾಮದ ಶಕ್ತಿದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನ.10ರಂದು ರಾತ್ರಿ 10 ಗಂಟೆಗೆ ಭಕ್ತರಿಗಾಗಿ ಪೂಜೆ ಸಲ್ಲಿಸುತ್ತಿದ್ದ ಪ್ರಧಾನ ಅರ್ಚಕ ಮಲ್ಲಿಕಾರ್ಜುನ ಪೂಜಾರಿ ಹಾಗೂ ಸಹ ಅರ್ಚಕರಾದ ವೀರಬಸವ ಮತ್ತು ಸುನೀಲ ಅವರ ಮೇಲೆ ಗ್ರಾಮದ ನಿವಾಸಿಗಳಾದ ಗಂಗಣ್ಣ ನಾಯಕ, ಶರಣಬಸವ ಹಾಗೂ ವೀರೇಶ ಎಂಬವರು ಮದ್ಯಪಾನ ಮಾಡಿ ಬಂದು ಪೂಜೆಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ಅರ್ಚಕರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಯಿಂದ ದೇವಸ್ಥಾನದ ಭಕ್ತರು ಹಾಗೂ ಅರ್ಚಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿ ಅರ್ಚಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಅರ್ಚಕರಿಗೆ ಹಾಗೂ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ. ಮಲ್ಲಪ್ಪ ಹೂಗಾರ್, ಜಗದೀಶಯ್ಯ ಸ್ವಾಮಿ ಮಲ್ಲನಮಡುಗು, ದೊಡ್ಡಪ್ಪ ಹೂಗಾರ, ವೀರಭದ್ರಯ್ಯಸ್ವಾಮಿ ಸಂಗಪೂರು, ವೆಂಕೋಬರಾವ್ ದೇಸಾಯಿ, ಚನ್ನಬಸಯ್ಯ, ಮುದ್ದಯ್ಯಸ್ವಾಮಿ, ಪಂಪಣ್ಣ ಪೂಜಾರಿ, ಉದಯ ಪೂಜಾರಿ, ರಾಮು ನೀರಮಾನ್ವಿ, ನಾಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.









