ರಾಯಚೂರು: ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶಕ್ತಿನಗರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವುದರ ಜತೆಗೆ ಸುತ್ತಮುತ್ತಲಿನ ಒಂಬತ್ತು ಗ್ರಾಮಗಳನ್ನು ಠಾಣಾ ವ್ಯಾಪ್ತಿಗೆ ಸೇರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ರಾಯಚೂರು ಜಿಲ್ಲಾ ಘಟಕದ ತಾಲೂಕು ಸಂಚಾಲಕ ಎಸ್. ಕೃಷ್ಣಪ್ಪ ಘಂಟಿ ಆಗ್ರಹಿಸಿದ್ದಾರೆ.

ಈ ಸಂಬಂಧ ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ರಾಯಚೂರು–ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಭಾರೀ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಅಪಘಾತಗಳ ಆತಂಕ ಎದುರಾಗಿದೆ. ಮತ್ತೊಂದೆಡೆ ಹರ್ಷಿಣಿಗಿ, ಕಾಡ್ಲೂರು, ಗುರ್ಜಾಪುರ, ಕರೆಕಲ್ಲು, ಬೇವಿನಬಂಚಿ, ರಂಗಾಪುರ, ಗೆಂಜಳ್ಳಿ, ಹನುಮದೊಡ್ಡಿ ಹಾಗೂ ಇಬ್ರಾಹಿಂ ದೊಡ್ಡಿ ಗ್ರಾಮಗಳ ಜನರು ತುರ್ತು ಸಂದರ್ಭಗಳಲ್ಲಿ ಪೊಲೀಸ್ ನೆರವು ಪಡೆಯಲು ದೂರದ ಪೊಲೀಸ್ ಠಾಣೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ವಿಶೇಷವಾಗಿ ರಾತ್ರಿ ವೇಳೆ ಅಪಘಾತ, ಹಲ್ಲೆ ಹಾಗೂ ಗಲಾಟೆಗಳಂತಹ ಘಟನೆಗಳು ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮತ್ತು ತಕ್ಷಣ ಪೊಲೀಸ್ ನೆರವು ಪಡೆಯಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಜನರ ಸುರಕ್ಷತೆಯ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಕ್ತಿನಗರ ಪೊಲೀಸ್ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವುದರ ಜತೆಗೆ ಒಂಬತ್ತು ಗ್ರಾಮಗಳನ್ನು ಠಾಣಾ ವ್ಯಾಪ್ತಿಗೆ ಸೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಸಮಿತಿಯಿಂದ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಸ್. ಕೃಷ್ಣಪ್ಪ ಘಂಟಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಎಸ್. ಷಣ್ಮುಖಪ್ಪ ಘಂಟಿ, ಹೋಬಳಿ ಸಂಚಾಲಕ ಸುರೇಶ್ ಗಂಜಳ್ಳಿ ಹಾಗೂ ಹೋಬಳಿ ಸಹ ಸಂಚಾಲಕ ಭಾವಾ ಸಾಬ್ ಉಪಸ್ಥಿತರಿದ್ದರು.

Previous articleಪೋತ್ನಾಳ್ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ -2 ಕಾರ್ಯಕ್ರಮ
Next articleಸಿರವಾರದಲ್ಲಿ ‘ಸರ್ವೋದಯ ಪತ್ತಿನ ಸೌಹಾರ್ದ ಸಹಕಾರಿ’ ಲೋಕಾರ್ಪಣೆ: ಬಡವರ ಬದುಕಿಗೆ ಆಸರೆಯಾಗಲಿ