ರಾಯಚೂರು: ಯುವಕರು ದೇಶದ ಶಕ್ತಿಯಾಗಿದ್ದು, ಭಾರತದ ಭವಿಷ್ಯ ಅವರ ಕೈಯಲ್ಲಿದೆ. ಆದ್ದರಿಂದ ಯುವಕರು ವ್ಯಸನಮುಕ್ತರಾಗಿ ದೇಶದ ಭದ್ರತೆಗೆ ಪಾಲುದಾರರಾಗಬೇಕು ಎಂದು ಮನೋವೈದ್ಯ ಡಾ. ಪವನ್ ಹೇಳಿದರು. (ನಶಮುಕ್ತ ಯುವ)

ನಗರದ ವೇದಾಂತ ಪದವಿ ಮಹಾವಿದ್ಯಾಲಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತಕ್ಕಾಗಿ ನಶಮುಕ್ತ ಯುವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವ್ಯಸನಗಳಿಗೆ ಒಳಗಾಗದೆ, ಮನಸ್ಸನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದು ತಿಳಿಸಿದರು.

ಭಾರತ ಸರ್ಕಾರ 2020ರಿಂದ ನಶಮುಕ್ತ ಅಭಿಯಾನ ಆರಂಭಿಸಿದ್ದು, ಯುವಕ-ಯುವತಿಯರು ಆಕರ್ಷಣೆಗೆ ಒಳಗಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳಬಾರದು. ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನ ಯೋಗಗುರು ಮಲ್ಲಿಕಾರ್ಜುನ ಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿ, ಪದ್ಮಾಸನ, ವೃಕ್ಷಾಸನ ಸೇರಿದಂತೆ ವಿವಿಧ ಆಸನಗಳ ತರಬೇತಿ ನೀಡಿದರು. ಧ್ಯಾನದ ಮೂಲಕ ಮಾನಸಿಕ ಸದೃಢತೆ ಬೆಳೆಸಿಕೊಳ್ಳುವ ಹಾಗೂ ವ್ಯಸನಗಳಿಂದ ದೂರವಿರಲು ಪ್ರತಿದಿನ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವ ಅಗತ್ಯವನ್ನು ವಿವರಿಸಿದರು.

ಕರಾಟೆ ತರಬೇತಿದಾರರಾದ ಪವಿತ್ರ ಅವರು ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆಯ ಕೌಶಲ್ಯಗಳನ್ನು ಪರಿಚಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ರಾಕೇಶ ರಾಜಲಬಂಡಿ ಮಾತನಾಡಿ, ಯುವಶಕ್ತಿಯನ್ನು ಸದೃಢಗೊಳಿಸಿ ವಿಕಸಿತ ಭಾರತ ನಿರ್ಮಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವ್ಯಸನಮುಕ್ತ ಜೀವನ ನಡೆಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ತಿಮ್ಮಯ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸರ್ಕಾರ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ವೇದಾಂತ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಸುಮಾರು 200 ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯುತ್ತಿದ್ದು, ಸುಮಾರು 40 ಸಾವಿರ ಸ್ವಯಂಸೇವಕರು ಭಾಗವಹಿಸುತ್ತಿದ್ದಾರೆ. ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಈ ಕಾರ್ಯಕ್ರಮ ಆಯೋಜಿಸಲು ತಮ್ಮ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿದೆ. ವಿದ್ಯಾರ್ಥಿಗಳು ವ್ಯಸನಮುಕ್ತರಾಗಿ ‘ವಿಕಸಿತ ಭಾರತಕ್ಕಾಗಿ ನಶಮುಕ್ತ ಯುವಕರು’ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಚನ್ನಬಸವ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಭರತ್ ವಂದಿಸಿದರು.

Previous articleಶರಣಪ್ಪ ಮಟ್ಟೂರು ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ: ಎ.ವಸಂತಕುಮಾರ
Next articleಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರು ಗೆಲುವು ನಿಶ್ಚಿತ: ಬಸನಗೌಡ ದದ್ದಲ್