ಮಾನ್ವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ ಮತ್ತು ವಿಡಿಯೋ ಪ್ರಸಾರ ಮಾಡಿರುವುದನ್ನು ಖಂಡಿಸಿ ಪಟ್ಟಣದ ಬಸವ ವೃತ್ತದಲ್ಲಿ ವಿವಿಧ ಬಸವಪರ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಸವ ಕೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ತಾಲೂಕು ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಲೇಖಕ ವಿಶ್ವೇಶ್ವರ ಭಟ್ ಹಾಗೂ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಪಾಟೀಲ್ ಬೆಟ್ಟದೂರು ಮಾತನಾಡಿ, ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ ಹಾಗೂ ವಿಡಿಯೋ ಹರಿಬಿಡುವ ಮೂಲಕ ಸಮಾಜದ ಶಾಂತಿಗೆ ಭಂಗ ಉಂಟುಮಾಡುವ ಪ್ರಯತ್ನ ನಡೆದಿದೆ. ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ, ಬಸವೇಶ್ವರರ ಕುರಿತು ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸುವುದನ್ನು ಮುಖ್ಯಮಂತ್ರಿ ಖಂಡಿಸಿದ್ದು, ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಿದ್ದಾರೆ. ವಿಶ್ವಗುರು ಬಸವಣ್ಣ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೂಜಿಸಿ ಗೌರವಿಸಲಾಗುತ್ತದೆ. ಸಮಾಜದ ಮಹನೀಯರ ಬಗ್ಗೆ ಯಾರೂ ಅವಹೇಳನಕಾರಿಯಾಗಿ ಮಾತನಾಡಬಾರದು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪ್ರತಿಭಟನಾಕಾರರು ಬಸವ ವೃತ್ತದಲ್ಲಿ ವಿವಾದಿತ ಲೇಖಕ ರವಿ ಹಂಜ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಅರುಣಚಂದಾ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಶ್ರೀಧರ ಸ್ವಾಮಿ, ಅಧ್ಯಕ್ಷ ಹರಿಹರ ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಚಿಮಲಾಪುರ, ಡಾ. ಬಸವಪ್ರಭು ಪಾಟೀಲ್, ನಾಗರತ್ನ ಪಾಟೀಲ್, ಬಿ.ವಿ. ರೆಡ್ಡಿ, ಶಂಕರಗೌಡ ಹರವಿ, ತಿಮ್ಮರೆಡ್ಡಿ ಭೋಗವತಿ, ಶರಣಬಸವ ನೀರಮಾನ್ವಿ, ಶರಣಪ್ಪ ಮೆದಾ, ಶೇಖರಪ್ಪಗೌಡ, ಸಿದ್ದಲಿಂಗಪ್ಪ ವಕೀಲರು, ಮೆಹಬೂಬ್ ಮೂಜೀಬ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ಜನರು ಭಾಗವಹಿಸಿದ್ದರು.

Previous articleಕುಡಿಯುವ ನೀರಿಗಾಗಿ ಪರದಾಟ: ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು
Next articleಮಾನ್ವಿ: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಶಾಸಕ ಹಂಪಯ್ಯ ನಾಯಕ ಸೂಚನೆ