ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟ ಹಾಗೂ ಸಂಘಟನಾ ನಾಯಕತ್ವವನ್ನು ಮೆಚ್ಚಿ ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ನೂರಾರು ಯುವಕರು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಗೊಂಡರು.

ಗ್ರಾಮದ ನಾಗರಾಜ ಹೆಗ್ಗಸನಹಳ್ಳಿ ಅವರ ನೇತೃತ್ವದಲ್ಲಿ ಯುವಕರು ಸಂಘಟನೆಯ ಸದಸ್ಯತ್ವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ ಎಂ. ಮಾತನಾಡಿ, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮತ್ತು ಸಿದ್ಧಾಂತವನ್ನು ಮೆಚ್ಚಿ ನೂರಾರು ಯುವಕರು ಸಂಘಟನೆಗೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ. ಇದರಿಂದ ಸಂಘಟನೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು.

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಕನ್ನಡಿಗರಿಗೆ ಉದ್ಯೋಗ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯ ಕಾರ್ಖಾನೆಗಳಲ್ಲಿನ ವಿವಿಧ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ನಗರ ಪ್ರದೇಶ ಹಾಗೂ ಗಡಿಭಾಗಗಳಲ್ಲಿ ಅನ್ಯಭಾಷಿಕರ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ನೆಲ, ಜಲ ಹಾಗೂ ನಾಡಿನ ಅಸ್ಮಿತೆಯ ರಕ್ಷಣೆಗೆ ಸಂಘಟನೆ ಬದ್ಧವಾಗಿದೆ. ಜಿಲ್ಲೆಯ ಪ್ರತಿ ತಾಲೂಕು, ವಾರ್ಡ್ ಹಾಗೂ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ ಸಂಘಟನಾ ಕಾರ್ಯ ಕೈಗೊಂಡಿದ್ದು, ಇದೀಗ ಪ್ರತಿ ಹಳ್ಳಿಯಲ್ಲೂ ಕರವೇ ಘಟಕಗಳನ್ನು ರಚಿಸಿ ಸಂಘಟನೆಯ ಶಕ್ತಿ ಹೆಚ್ಚಿಸಲಾಗುತ್ತಿದೆ ಎಂದರು.

ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯಕರ್ತರು ಶ್ರಮಿಸಬೇಕು. ಕರ್ನಾಟಕ ರಾಜ್ಯೋತ್ಸವದ ಬಳಿಕ ಕನ್ನಡ ನಾಡು, ನುಡಿ, ನೆಲ ಹಾಗೂ ಜಲದ ರಕ್ಷಣೆಗಾಗಿ ನಿರಂತರ ಹೋರಾಟಗಳನ್ನು ರೂಪಿಸಲಾಗುವುದು. ಕನ್ನಡದ ರಕ್ಷಣೆಗೆ ಯಾವುದೇ ತ್ಯಾಗಕ್ಕೂ ಸಂಘಟನೆ ಸಿದ್ಧವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನರಸಪ್ಪ, ಹನುಮಂತ ಬಾಗಲಿ, ಬಾಬು, ನರಸಿಂಹಮೂರ್ತಿ, ಸಂತೋಷ, ಪ್ರವೀಣ್, ಸಂಗಪ್ಪ, ಸುರೇಶ, ಲಿಂಗನಗೌಡ, ಅಮರೇಶ, ರಘು, ಮಧು, ನವೀನ್, ಶುಭಂ, ಬಸವರಾಜ ಸೇರಿದಂತೆ ಹಲವು ಯುವಕರು ಕರವೇಗೆ ಸೇರ್ಪಡೆಗೊಂಡರು.

ಕರವೇ ಮುಖಂಡರಾದ ಎಂ.ಡಿ. ಸಾಧಿಕ್, ಅಬ್ಬಾಕರ್, ರಾಜೇಶ್, ನರಸಪ್ಪ ಗಂಜಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Previous articleಬಿ.ವಿ.ಆರ್. ಕುಟುಂಬದವರಿಂದ ತಾಲೂಕಿನ ಶೈಕ್ಷಣಿಕ ಅಭಿವೃದ್ದಿ: ರಾಜಾ ಸುಭಾಶ್ಚಂದ್ರನಾಯಕ
Next articleನವೆಂಬರ್ 13, 2026ಕ್ಕೆ ಪ್ರಳಯವಾಗಲಿದೆಯೇ? ವೈರಲ್ ಯುಗಾಂತ್ಯ ಸುದ್ದಿಯ ಅಸಲಿ ಸತ್ಯವೇನು..?