ಕನ್ನಡ ಭಾಷೆ ಪ್ರತಿಯೊಬ್ಬರ ಮಾತೃಭಾಷೆಯಾಗಬೇಕು: ಕುಲಸಚಿವ ಡಾ. ಟಿ. ಶ್ರೀನಿವಾಸ

ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಕುಲಸಚಿವ ಡಾ. ಟಿ. ಶ್ರೀನಿವಾಸ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಸಮನ್ವಯದ ಸಂಸ್ಕೃತಿಯನ್ನು ಬೆಳೆಸಿದೆ. ಎಲ್ಲರನ್ನೂ ಒಳಗೊಳ್ಳುವ ವಿಶಾಲ ಮನೋಭಾವದ ಸಂಸ್ಕೃತಿಯನ್ನು ಕರ್ನಾಟಕ ಹೊಂದಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ನವೋದಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮಾತೃಭಾಷೆಗಳು ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿಯಾಗಿದ್ದರೂ, ಅವರೆಲ್ಲರೂ ಕನ್ನಡವನ್ನು ಪ್ರೀತಿಯಿಂದ ಕಲಿತು ಸಂವಹನ ಭಾಷೆಯಾಗಿ ಬಳಸುತ್ತಿರುವುದು ಹೆಮ್ಮೆಯ ಸಂಗತಿ. ಕುಲಸಚಿವನಾಗಿ ಈ ಭಾಷಾ ಬಾಂಧವ್ಯವನ್ನು ಕಂಡು ಸಂತೋಷವಾಗುತ್ತಿದೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವವನ್ನು ಕೇವಲ ಧ್ವಜಾರೋಹಣ, ಮೆರವಣಿಗೆ ಹಾಗೂ ಸಿಹಿ ಹಂಚಿಕೆಗೆ ಸೀಮಿತಗೊಳಿಸಬಾರದು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಸಂಕಲ್ಪದ ದಿನವನ್ನಾಗಿ ಆಚರಿಸಬೇಕು. ಕನ್ನಡತನವನ್ನು ಕೇವಲ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರವಲ್ಲದೆ, ಪ್ರತಿದಿನದ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯ ಬಳಕೆ ಮನೆಗಳಿಂದಲೇ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ವಿಶೇಷ ವರದಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಕನ್ನಡಕ್ಕೇ ಅಪಮಾನ! ಎಐ ಸೃಷ್ಟಿಸಿದ ಶುಭಾಶಯ ಪೋಸ್ಟರ್‌ಗಳಲ್ಲಿ ಅಕ್ಷರಗಳ ಅಪಭ್ರಂಶ; ಕನ್ನಡಾಭಿಮಾನವೋ, ಕೇವಲ ಪ್ರದರ್ಶನವೋ?

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರ್ನಾಟಕ ಅಪಾರ ಕೊಡುಗೆ ನೀಡಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಕನ್ನಡಿಗರ ಹೆಮ್ಮೆಯ ಪ್ರತೀಕಗಳಾಗಿವೆ. ಕನ್ನಡಿಗರು ವಿಶಾಲ ಹೃದಯದವರಾಗಿದ್ದು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ. ಕನ್ನಡ ಪ್ರತಿಯೊಬ್ಬರ ನಾಲಿಗೆಯ ಭಾಷೆಯಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಸೇವೆ ಸ್ಮರಣೀಯವಾಗಿದೆ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಏಕೀಕರಣ ಹೋರಾಟದಲ್ಲಿ ರಾಯಚೂರು ಜಿಲ್ಲೆಯ ಕೊಡುಗೆಯೂ ಮಹತ್ವದ್ದಾಗಿದೆ. ತಾರಾನಾಥ, ಕೃಷ್ಣರಾಯ ಜೋಶಿ, ಅಮರೇಶ್ವರ ಪಾಟೀಲ್ ಆಲ್ಕೋಡ್ ಹಾಗೂ ಜಯತೀರ್ಥ ರಾಜಪುರೋಹಿತ ಅವರ ಸೇವೆಯನ್ನು ಸ್ಮರಿಸಬೇಕು. ಶಾರದಾ ಶಾಲೆ ಮತ್ತು ಕನ್ನಡ ಸಂಘಗಳು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ ಎಂದರು.

ರಾಯಚೂರು ಜಿಲ್ಲೆ ಕೃಷಿ, ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದ್ದು, ಎರಡು ನದಿಗಳು ಜಿಲ್ಲೆಯ ಹೆಮ್ಮೆಯ ಪ್ರತೀಕಗಳಾಗಿವೆ. ಅಖಂಡ ಕರ್ನಾಟಕದ ಏಕತೆ ಮತ್ತು ಅಸ್ಮಿತೆಗೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಭುವನೇಶ್ವರಿ ದೇವಿಯ ಸುಂದರ ಕಲಾಕೃತಿಯನ್ನು ರೂಪಿಸಲಾಗಿತ್ತು. ರಾಜ್ಯೋತ್ಸವದ ಸಂಭ್ರಮದಲ್ಲಿ ಸಂಸ್ಥೆಯ ಕಾರ್ಯಾಚರಣೆ ನಿರ್ದೇಶಕ ಡಾ. ಅಮೃತ ರೆಡ್ಡಿ, ನಿರ್ದೇಶಕ ಸುರೇಶ ಬಾಬು, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಗುರುದತ್ತ ಪವಾರ್, ಅಧೀಕ್ಷಕ ಡಾ. ಅರುಣ್ ಕೆ.ಎನ್., ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Previous articleಮಂತ್ರಾಲಯದಲ್ಲಿ ಮಕ್ಕಳಿಗಾಗಿ ಉಚಿತ ಸುವರ್ಣಪ್ರಾಶನ ಕಾರ್ಯಕ್ರಮ
Next articleಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ಮಣ್ಣಿನ ಸ್ನಾನದ ಶಿಬಿರ