ಮಂತ್ರಾಲಯ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೇಂದ್ರ ಆರೋಗ್ಯ ಶಾಲೆಯಲ್ಲಿ ನ.1ರಂದು 16 ವರ್ಷದೊಳಗಿನ ಮಕ್ಕಳಿಗೆ ಉಚಿತ ಸುವರ್ಣಪ್ರಾಶನ ಕಾರ್ಯಕ್ರಮ ಆಯೋಜಿಸಲಾಯಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮಕ್ಕಳೊಂದಿಗೆ ಭಾಗವಹಿಸಿ ಸುವರ್ಣಪ್ರಾಶನ ಸೌಲಭ್ಯ ಪಡೆದುಕೊಂಡರು.
ಆಯುರ್ವೇದದ ಸಾಂಪ್ರದಾಯಿಕ ಪದ್ಧತಿಯಾದ ಸುವರ್ಣಪ್ರಾಶನದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಸುವರ್ಣಪ್ರಾಶನವು ಮಕ್ಕಳ ರೋಗನಿರೋಧಕ ಶಕ್ತಿ, ಜ್ಞಾಪಕಶಕ್ತಿ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬ ಸಾಂಪ್ರದಾಯಿಕ ನಂಬಿಕೆಯಿದೆ.
ಮುಖ್ಯ ವೈದ್ಯಾಧಿಕಾರಿ ಡಾ. ಸುಧೀಂದ್ರ ಅವರ ಮೇಲ್ವಿಚಾರಣೆಯಲ್ಲಿ, ಸಂಯೋಜಕ ಪಿ. ವಿಜಯೇಂದ್ರ ಅವರ ಸಮನ್ವಯದಲ್ಲಿ ಹಾಗೂ ಡಾ. ಅಂಬಾದಾಸ ಕುಲಕರ್ಣಿ ಮತ್ತು ಡಾ. ಯಲ್ಕೂರು ಯಶಸ್ವಿನಿ ಅವರ ವೈದ್ಯಕೀಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಠದ ವತಿಯಿಂದ ಈ ಉಚಿತ ಕಾರ್ಯಕ್ರಮ ಆಯೋಜಿಸಲಾಗಿತ್ತು.








