ಮಾನ್ವಿ: ತಾಲೂಕಿನ ಕರೆಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀದೇವಿ ಪುರಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಕೊಟ್ಟೂರು ಸಂಸ್ಥಾನಮಠ, ಹೊಸಪೇಟೆಯ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ದೇವಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು ದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆದುಕೊಂಡು ಶ್ರೀದೇವಿ ಪುರಾಣವನ್ನು ರಚಿಸಿದ ಶ್ರೀ ಚಿದಾನಂದ ಅವಧೂತರು ತಾವು ರಚಿಸಿದ ಶ್ರೀದೇವಿ ಪುರಾಣದಲ್ಲಿ ತಿಳಿಸಿದಂತೆ, ಶ್ರೀದೇವಿಯ ಪುರಾಣವೆಂದರೆ ಅದು ನಮ್ಮ ದೇಹದ ಪುರಾಣವಾಗಿದೆ. ನಮ್ಮೊಳಗಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಮೋಹಗಳೆಂಬ ಅರಿಷಡ್ವರ್ಗಗಳೇ ಶುಂಭ, ನಿಶುಂಭರೆಂಬ ದೈತ್ಯರು. ಈ ಅರಿಷಡ್ವರ್ಗಗಳನ್ನು ಯಾರು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುತ್ತಾರೋ, ಅವರು ದೇವಿಯ ಅನುಗ್ರಹವನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಪಂಚವನ್ನು ಮುನ್ನಡೆಸುವ ಶಕ್ತಿಯಾದ ಜಗನ್ಮಾತೆಯನ್ನು ಶ್ರೀದೇವಿ ಪುರಾಣದಲ್ಲಿ ಆಹ್ವಾನಿಸಿ, ಪ್ರವಚನಕಾರರು ನಮಗೆ ದೇವಿಯ ಮಹಿಮೆಯನ್ನು ತಿಳಿಸುತ್ತಾರೆ. ಪವಿತ್ರ ಕ್ಷೇತ್ರವಾದ ಕರೆಗುಡ್ಡದ ಶ್ರೀ ಮಹಾಂತೇಶ್ವರ ಮಠದಲ್ಲಿ ಶಕ್ತಿಸ್ವರೂಪಿಣಿಯಾದ ಜಗನ್ಮಾತೆ ನೆಲೆಸಿದ್ದು, ಇಂತಹ ಪವಿತ್ರವಾದ ಜಾಗೃತ ಕ್ಷೇತ್ರದಲ್ಲಿ ಶ್ರೀದೇವಿ ಪುರಾಣವನ್ನು ಆಲಿಸುವುದರಿಂದ ಹಾಗೂ ದೇವಿಯನ್ನು ಆರಾಧನೆ ಮಾಡುವುದರಿಂದ ದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಸೃಷ್ಟಿಯನ್ನು ಆಳುತ್ತಿರುವುದು ಶಕ್ತಿ, ಜ್ಞಾನ, ಸಂಪತ್ತು ಎನ್ನುವ ಮೂರು ದೇವತೆಗಳು. ಈ ಮೂರು ದೇವತೆಗಳ ಶಕ್ತಿಗಳನ್ನು ಸಾತ್ವಿಕವಾಗಿ, ಸದ್ಬಳಕೆ ಮಾಡಿಕೊಳ್ಳುವವರು ಸಂತರಾಗುತ್ತಾರೆ. ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳದವರು ಸಾಮಾನ್ಯರಾಗುತ್ತಾರೆ. ಜ್ಞಾನವನ್ನು ಲೋಕಕ್ಕಾಗಿ ಉಪಯೋಗಿಸಿದವರು ದೇವತೆಗಳಾಗುತ್ತಾರೆ. ಜ್ಞಾನವನ್ನು ಕೆಟ್ಟ ಕೆಲಸಗಳಿಗಾಗಿ ದುರುಪಯೋಗ ಮಾಡಿಕೊಳ್ಳುವವರು ಅಸುರರಾಗುತ್ತಾರೆ. ಜಗತ್ತಿನಲ್ಲಿ ಕೇವಲ ಶಕ್ತಿ, ಜ್ಞಾನ, ಸಂಪತ್ತನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ದೇವಿಯ ಅನುಗ್ರಹವೊಂದನ್ನು ಪಡೆದುಕೊಂಡಲ್ಲಿ ಎಲ್ಲವನ್ನೂ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದನ್ನು ನಮಗೆ ತಿಳಿಸಿಕೊಡುವುದೇ ವಿಜಯದಶಮಿ ಆಚರಣೆಯ ಮುಖ್ಯ ಉದ್ದೇಶವಾಗಿದೆ. ದಸರಾ ಹಬ್ಬದಲ್ಲಿ ಪ್ರತಿದಿನ ಒಂದೊಂದು ರೂಪದಂತೆ ಶಕ್ತಿಸ್ವರೂಪಿಣಿಯಾದ ದೇವಿಯ ವಿವಿಧ ರೂಪಗಳನ್ನು ಆರಾಧನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಂದವಾಡಗಿ ಶ್ರೀ ಮಹಾಂತೇಶ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನೀಡಿದರು. ಸಂಗೀತ ಸೇವೆಯನ್ನು ಅಮರೇಶ ಗವಾಯಿಗಳು ಸಾಲಿಮಠ ನೀಡಿದರು. ತಬಲಾ ಸಾಥ್ ಅನ್ನು ಬಸವರಾಜಯ್ಯ ಹಿರೇಮಠ ನೀಡಿದರು.
ಗ್ರಾಮದ ಮುಖಂಡರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದರು.

Previous articleಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಕಾಂಗ್ರೆಸ್ ಬದ್ಧ: ಎ. ವಸಂತಕುಮಾರ್
Next articleಮಾನ್ವಿಯ ಕಲ್ಮಠದಲ್ಲಿ 51ನೇ ವರ್ಷದ ಮಾನ್ವಿ ದಸರಾ ಮಹೋತ್ಸವ